ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳಿoದ ಆಗುವ ಸಮಸ್ಯೆ ಅರಿತ ಕಾಂಗ್ರೆಸ್ ಕಾರ್ಯಕರ್ತರು ಬಾಳೆಗಿಡ ನೆಟ್ಟು ಆ ಹೊಂಡವನ್ನು ಮುಚ್ಚಿದ್ದಾರೆ!
ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ವಿಳಂಬ ನೀತಿ ವಿರುದ್ಧ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಿಲೇಕಣಿಯಲ್ಲಿನ ಹೊಂಡಗಳನ್ನು ನೋಡಿ ಅವರು ಆಕ್ರೋಶವ್ಯಕ್ತಪಡಿಸಿದರು. `ಹೆದ್ದಾರಿಯಲ್ಲಿನ ಹೊಂಡದಿoದಾಗಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ಮಳೆ ಶುರುವಾದರೆ ಇಲ್ಲಿನವರ ಸಮಸ್ಯೆ ಇನ್ನಷ್ಟು ಹದಗೆಡಲಿದೆ’ ಎಂದು ಪ್ರತಿಭಟನಾಕಾರರು ವಿವರಿಸಿದರು.
`ಕಳೆದ ವರ್ಷ ಮಳೆ ಸುರಿದಾಗಲೂ ಜನ ಸಮಸ್ಯೆ ಅನುಭವಿಸಿದ್ದರು. ಈ ಭಾಗದ ಸಂಚಾರ ಅಸ್ತವ್ಯಸ್ಥವಾಗಿದ್ದು, ಕೂಡಲೇ ರಸ್ತೆ ರಿಪೇರಿ ನಡೆಸಬೇಕು’ ಎಂದು ಪಟ್ಟುಹಿಡಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಜಿಲ್ಲಾಡಳಿತದ ವಿರುದ್ಧವೂ ಅಸಮಧಾನ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲೈಸುವ ಪ್ರಯತ್ನ ಮಾಡಿದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. `ಹೆದ್ದಾರಿ ಕೆಲಸ ಮುಗಿಸುವ ದಿನಾಂಕದ ಬಗ್ಗೆ ಪ್ರಕಟಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.
`ಈ ರಸ್ತೆ ವಿಷಯವಾಗಿ ಇನ್ನೂ ಅನೇಕರಿಗೆ ಪರಿಹಾರ ನೀಡುವುದು ಬಾಕಿಯಿದೆ. ವಿದ್ಯುತ್ ಕಂಬ ಅಳವಡಿಸುವಿಕೆ, ಕುಡಿಯುವ ನೀರಿನ ಪೈಪ್ ಪೂರೈಕೆ ಕೆಲಸವೂ ಆಗಬೇಕಿದೆ. ಅದಕ್ಕಾಗಿ ಕಾಮಗಾರಿ ನಿಧಾನವಾಗುತ್ತಿದೆ’ ಎಂದು ಹೆದ್ದಾರಿ ಅಧಿಕಾರಿಗಳು ಸಮಜಾಯಿಶಿ ನೀಡಿದರು. ಅದಾಗಿಯೂ ಪ್ರತಿಭಟನಾಕಾರರು ಆ ಮಾತು ಒಪ್ಪಲಿಲ್ಲ.