ಉತ್ತರ ಕನ್ನಡ ಜಿಲ್ಲೆಯಲ್ಲಿನ ಬಾಲ ಗರ್ಭಿಣಿಯರ ಬಗ್ಗೆ ಆರೋಗ್ಯ ಮಂತ್ರಿ ದಿನೇಶ ಗುಂಡೂರಾವ್ ಕಳವಳವ್ಯಕ್ತಪಡಿಸಿದ್ದಾರೆ. ಜೊತೆಗೆ, `ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಅವಶ್ಯವಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಶುಕ್ರವಾರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ನಡೆಸಿದ ಅವರು ಶಿರಸಿ-ಸಿದ್ದಾಪುರ-ಯಲ್ಲಾಪುರ ಭಾಗದಲ್ಲಿ ಸಂಚಾರ ನಡೆಸಿದರು. ಶಿರಸಿಯ ಆಡಳಿತ ಸೌಧದ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. `ಈಚೆಗೆ ಹದಿಹರೆಯದವರ ಗರ್ಭಧಾರಣೆ ಹೆಚ್ಚಾಗುತ್ತಿದೆ. ನಂತರ ಮಾತ್ರೆಗಳನ್ನು ತೆಗೆದುಕೊಂಡು ಗರ್ಭಪಾತ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಎದುರಾಗುತ್ತಿದೆ’ ಎಂದು ಅವರು ಆತಂಕವ್ಯಕ್ತಪಡಿಸಿದರು. ಈ ವೇಳೆ `ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಅವಶ್ಯವಿದೆ’ ಎಂದು ಪ್ರತಿಪಾದಿಸಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಬಹಳ ವ್ಯತ್ಯಾಸ ಕಾಣುತ್ತಿದೆ. ಯಾವ ಕಾರಣದಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ? ಎಂದು ಪತ್ತೆ ಮಾಡಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು. ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿ ನಿರಂತರ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು. `ಭ್ರೂಣ ಪತ್ತೆ ಹಚ್ಚುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
`ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ ಹಾಗೂ ದಾಂಡೇಲಿಯಲ್ಲಿ ನಕಲಿ ವೈದ್ಯರಿದ್ದರು. ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜಕುಮಾರ ಸಭೆಗೆ ಮಾಹಿತಿ ನೀಡಿದರು.