ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡಬೇಕು ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ಸಹಿ ಅಭಿಯಾನ ನಡೆದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಸೇರಿ ಹಲವರು ಇದಕ್ಕೆ ಕೈ ಜೋಡಿಸಿದ್ದಾರೆ.
ಸೋಮವಾರ ಕುಮಟಾ ಬಿಜೆಪಿ ಕಚೇರಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಪಾಕ್ ಪ್ರಜೆಗಳ ವಿರುದ್ಧ ಬಿಜೆಪಿಗರು ಕಿಡಿಕಾರಿದರು. ಅಕ್ರಮ ವಲಸಿಗರನ್ನು ಅವರವರ ದೇಶಕ್ಕೆ ಕಳುಹಿಸಬೇಕು ಎಂದು ಈ ವೇಳೆ ಬಿಜೆಪಿಗರು ಸರ್ಕಾರಕ್ಕೆ ಪತ್ರವನ್ನು ರವಾನಿಸಿದರು. `ಭಾರತೀಯರಿಗೆ ಎಲ್ಲದಕ್ಕಿಂತ ದೇಶ ಮುಖ್ಯ ಎಂಬ ಭಾವನೆಯಿರಬೇಕು. ಆದರೆ, ಕರ್ನಾಟಕದಲ್ಲಿನ ಕಾಂಗ್ರೆಸಿಗರಿಗೆ ಅಧಿಕಾರವೇ ಮುಖ್ಯವಾಗಿದೆ. ಹೀಗಾಗಿ ವಿಸಾ ಇಲ್ಲದ ವಿದೇಶಿಗರನ್ನು ಸಹ ಕಾಂಗ್ರೆಸಿಗರು ಇಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ’ ಎಂದು ದಿನಕರ ಶೆಟ್ಟಿ ದೂರಿದರು.
`ಕಾಶ್ಮೀರದಲ್ಲಿನ ಉಗ್ರರ ದಾಳಿಯ ವಿರುದ್ಧ ದಿಟ್ಟ ಕ್ರಮಕ್ಕೆ ಮುಂದಾಗಿರುವ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಕಾರ್ಯಕ್ಕೆ ಭಾರತೀಯರಾದ ನಾವು ಕೈಜೋಡಿಸಬೇಕು. ಎಲ್ಲರೂ ಸೇರಿ ಅಕ್ರಮ ಪಾಕಿಸ್ತಾನಿ ವಲಸಿಗರನ್ನು ಅವರ ದೇಶಕ್ಕೆ ಓಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದರು. `ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ಥಾನದ ಜೊತೆ ಯುದ್ದ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೃಷಿ ಸಚಿವ ಚಲುವರಾಯ ಸ್ವಾಮಿ ಬೇರೆ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಗೊಂದಲ ಎಬ್ಬಿಸಿದ್ದಾರೆ’ ಎಂದು ದೂರಿದರು. `ಕರ್ನಾಟಕದಲ್ಲಿ ಹಿಂದುಗಳಿಗೆ ಅನ್ಯಾಯ ಆಗುತ್ತಿದ್ದರೂ ಇಲ್ಲಿ ನಮಗೆ ಬದುಕುವ ಗ್ಯಾರಂಟಿಯೇ ಇಲವಾಗಿದೆ. ಎಲ್ಲದಕ್ಕೂ ಹೋರಾಟ ಅನಿವಾರ್ಯವಾಗಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನಿಯರನ್ನು ಅವರವರ ದೇಶಕ್ಕೆ ವಾಪಸ್ ಕಳುಹಿಸಲು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸುವ ಮತ್ತು ಈ ಬಗ್ಗೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಸಹಿ ಸಂಗ್ರಹದ ಮನವಿ ಪತ್ರವನ್ನು ಮೇ 6ರಂದು ಕಾರವಾರದಲ್ಲಿ ನಮ್ಮ ಪಕ್ಷದಿಂದ ಸಲ್ಲಿಕೆ ಮಾಡಲಿದ್ದೇವೆ’ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಎನ್ ಎಸ್ ಹೆಗಡೆ ತಿಳಿಸಿದರು.