ಶಿರಸಿ ಅಜ್ಜಿಬೇಳದ ಚಾಳಗದ್ದೆ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಅಶೋಕ್ ರಾತೋಡ್ ನಿಯಂತ್ರಿಸಿದ್ದಾರೆ.
ಬುಧವಾರ ಇಲ್ಲಿ ಅಜ್ಜಿಬೇಳ ಮಿಸ್ಲಗುಂದಿಯ ಅನಂತಮೂರ್ತಿ ನಾಯ್ಕ ಅವರು ಅಂದರ್ ಬಾಹರ್ ಆಡಿಸಿ ಹಣ ಗೆಲ್ಲುತ್ತಿದ್ದರು. ಸಿದ್ದಾಪುರದ ಕಾನಗೋಡಿನ ವೀರಭದ್ರ ಜಂಗಣ್ಣನವರ್, ಅಜ್ಜಿಬೇಳ ಚಾಳಗದ್ದೆಯ ಪರಮೇಶ್ವರ ಗೌಡ, ಹೆಗಡೆಕಟ್ಟಾದ ಮಹೇಶ ಗೌಡ, ಕಾನಗೋಡಿನ ಮಂಜುನಾಥ ಗೌಡ, ಚಾಳಗದ್ದೆಯ ಮಂಜುನಾಥ ಗೌಡ, ಅಜ್ಜಿಬೇಳ ಕರೂರಿನ ನಾಗರಾಜ ಗೌಡ, ಶಿರಸಿಯ ಲಕ್ಷಣ ಗೌಡ ಇಸ್ಪಿಟ್ ಆಡುವಾಗ ಸಿಕ್ಕಿ ಬಿದ್ದರು. ಕಾಡಿನಲ್ಲಿ ಪ್ಲಾಸ್ಟಿಕ್ ಚಾಪೆ ಹಾಸಿ ಅದರ ಮೇಲೆ ಹಣ ಹರಡಿಕೊಂಡಿರುವುದನ್ನು ಪೊಲೀಸರು ಗಮನಿಸಿದರು. 25140ರೂ ಹಣ, ಇಸ್ಪಿಟ್ ಎಲೆ, ಬ್ಯಾಟರಿ ಸೇರಿ ಅಲ್ಲಿದ್ದ ಪರಿಕ್ಕರಗಳನ್ನು ಪೊಲೀಸರು ವಶಕ್ಕೆಪಡೆದರು. ಕಾಡಿನಲ್ಲಿ ಕಾನೂನುಬಾಹಿರ ಆಟವಾಡಿದವರ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ಅಣೆಕಟ್ಟಿನ ನೀರಿಗೆ ಬಿದ್ದ ರೈತ: ಸಾವು!
ಮುಂಡಗೋಡದ ಅಂದಾನಯ್ಯ ಚಿಕ್ಕಮಠ ಅವರು ಅತ್ತಿವೇರಿ ಅಣೆಕಟ್ಟಿನ ಹಿನ್ನೀರಿಗೆ ಬಿದ್ದು ಸಾವನಪ್ಪಿದ್ದಾರೆ. 40 ವರ್ಷದ ಅಂದಾನಯ್ಯ ಚಿಕ್ಕಮಠ ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥರಾಗಿದ್ದ ಅವರು ಎಲ್ಲೆಂದರಲ್ಲಿ ತಿರುಗಾಡಿಕೊಂಡಿದ್ದರು. ಮೇ 3ರ ಮಧ್ಯಾಹ್ನದ ನಂತರ ಅವರು ಕಾಣೆಯಾಗಿದ್ದರು. ಮೇ 4ರ ಮಧ್ಯಾಹ್ನದ ವೇಳೆಗೆ ಅವರು ಶವವಾಗಿದ್ದರು. ಅತ್ತಿವೇರಿ ಅಣೆಕಟ್ಟಿನ ಹಿನ್ನೀರಿನಲ್ಲಿ ಅವರ ಶವ ಕಾಣಿಸಿತು. ತಮ್ಮನ ಸಾವಿನ ಬಗ್ಗೆ ಚನ್ನಯ್ಯ ಚಿಕ್ಕಮಠ ಅವರು ಪೊಲೀಸ್ ಪ್ರಕರಣ ದಾಖಲಿಸಿದರು.
ತೆಂಗಿನಮರದಿ0ದ ಬಿದ್ದ ಕಾರ್ಮಿಕ ಇನ್ನಿಲ್ಲ
ಹೊನ್ನಾವರದ ಉಮೇಶ ಗೌಡ (42) ಅವರು ತೆಂಗಿನಮರದಿoದ ಬಿದ್ದು ಸಾವನಪ್ಪಿದ್ದಾರೆ. ಮರದಿಂದ ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಕೆಕ್ಕಾರ್ ಮೂಲೆಗದ್ದೆಯವರಾಗಿದ್ದ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಮೇ 3ರಂದು ಅವರು ಮನೆ ಮುಂದಿನ ತೆಂಗಿನ ಮರ ಏರಿದ್ದರು. ಕಾಯಿ ಕೊಯ್ಯುವಾಗ ಆಯತಪ್ಪಿ ನೆಲಕ್ಕೆ ಬಿದ್ದರು. ಗಾಯಗೊಂಡಿದ್ದ ಅವರನ್ನು ಅಲ್ಲಿನ ಸಂದೀಪ ಗೌಡ, ನಾಗರಾಜ ಗೌಡ ಸೇರಿ ಉಪಚರಿಸಿದರು. ಉಮೇಶ ಅವರ ಪತ್ನಿ ಯಶೋಧಾ ಅವರು ಆಗಮಿಸಿದರು. ಉಮೇಶ ಅವರನ್ನು ರಿಕ್ಷಾ ಮೇಲೆ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರೊಳಗೆ ಉಮೇಶ ಗೌಡ ಅವರು ಶವವಾಗಿದ್ದರು.
ರೈಲಿಗೆ ಸಿಲುಕಿ ವೃದ್ಧೆ ಸಾವು
ಕುಮಟಾದಿಂದ ಮಂಕಿ ಕಡೆ ಹೊರಟಿದ್ದ ರೈಲಿಗೆ ಸಿಲುಕಿ 75 ವರ್ಷದ ವೃದ್ಧೆ ಸಾವನಪ್ಪಿದ್ದಾರೆ. ಹೊನ್ನಾವರ ವಂದೂರಿನ ಬಳಿಯ ಹೊರಕನಕೇರಿಯ ಅಕ್ಕಮ್ಮ ಮಾಸ್ತಿ ಗೌಡ ಸಾವನಪ್ಪಿದವರು. ಕಳೆದ ಐದು ವರ್ಷಗಳಿಂದ ಅಕ್ಕಮ್ಮ ಗೌಡ ಅವರು ಮಾನಸಿಕವಾಗಿ ಕುಗ್ಗಿದ್ದರು. ಮೇ 5ರಂದು ಅವರು ಹೊನ್ನಾವರದ ಕರ್ಕಿಯ ಮಠದ ಕೇರಿ ಬಳಿ ತೆರಳಿದ್ದರು. ಅಲ್ಲಿ ಹಾದು ಹೋದ ರೈಲ್ವೆ ಹಳಿ ದಾಟಲು ಪ್ರಯತ್ನಿಸಿದಾಗ ಅವರಿಗೆ ರೈಲು ಗುದ್ದಿತು. ಅಲ್ಲಿಯೇ ಅವರು ಕೊನೆಉಸಿರೆಳೆದರು. ಈ ಬಗ್ಗೆ ಅಕ್ಕಮ್ಮ ಗೌಡ ಅವರ ಪುತ್ರ ಶ್ರೀಧರ ಗೌಡ ಅವರು ಹೊನ್ನಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.
ಕಾರ್ಮಿಕನ ಸಾವಿನಲ್ಲಿ ಕುಟುಂಬದವರಿಗೆ ಅನುಮಾನ!
ಅಂಕೋಲಾದ ಗಂಗಾಧರ ಗೌಡ ಅವರ ಶವ ಗುಂಡಬಾಳದ ಕಲ್ಲಿನ ಹೊಂಡದಲ್ಲಿ ಕಾಣಿಸಿದೆ. ಹೀಗಾಗಿ ಅವರ ಸಾವಿನ ಬಗ್ಗೆ ಅನುಮಾನವ್ಯಕ್ತವಾಗಿದೆ. ಅಂಕೋಲಾದ ನೆವಳಸೆಯಲ್ಲಿ ಗಂಗಾಧರ ಗೌಡ ಅವರು ವಾಸವಾಗಿದ್ದರು. 46 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ದುಡಿಮೆಯ ಹಣವನ್ನು ಸರಾಯಿ ಕುಡಿಯಲು ಬಳಸುತ್ತಿದ್ದರು. ಮೇ 3ರಂದು ಅವರು ಕೆಲಸ ಮುಗಿಸಿ ಬಂದವರು ನೆವಳಸೆ ಗುಡ್ಡದ ಕಡೆ ಹೊರಟರು. ಅದಾದ ನಂತರ ಗಂಗಾಧರ ಗೌಡ ಅವರನ್ನು ನೋಡಿದವರಿಲ್ಲ. ಗುಂಡಬಾಳದಿoದ ಅರ್ದ ಕಿಮೀ ದೂರದ ಗುಡ್ಡದಲ್ಲಿರುವ ಕಲ್ಲಿನ ಕಂದಕದಲ್ಲಿ ಗಂಗಾಧರ ಗೌಡ ಅವರ ಶವ ಕಾಣಿಸಿದ್ದು, ಅವರು ಹೇಗೆ ಸಾವನಪ್ಪಿದರು? ಎಂಬುದು ನಿಗೂಡವಾಗಿದೆ. ಹೀಗಾಗಿ ಗಂಗಾಧರ ಗೌಡ ಅವರ ಸಾವಿನಲ್ಲಿ ಸಂಶಯವಿರುವುದಾಗಿ ಕುಟುಂಬದವರು ಅನುಮಾನವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಂಗಾಧರ ಗೌಡ ಅವರ ಸಹೋದರ ಸಂತೋಷ ಗೌಡ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
ಮೂತ್ರ ವಿಸರ್ಜನೆ ವೇಳೆ ರಕ್ತದ ವಾಂತಿ: ರಜೆಯಲ್ಲಿದ್ದ ಕಾರ್ಮಿಕನ ಬದುಕು ಅಂತ್ಯ!
ದುಡಿಯುವುದಕ್ಕಾಗಿ ಕಾರವಾರಕ್ಕೆ ಬಂದಿದ್ದ ಮಮತಾಜ್ ಪೌಜಿ ಮೂತ್ರ ವಿಸರ್ಜನೆ ವೇಳೆ ರಕ್ತವಾಂತಿಯಿ0ದ ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಮಮತಾಜ್ ಪೌಜಿ (30) ಎಲ್ & ಟಿ ಕಂಪನಿಯಲ್ಲಿ ದುಡಿಯುತ್ತಿದ್ದರು. ಮುದುಗಾದಲ್ಲಿನ ಲೇಬರ್ ಕ್ಯಾಂಪಿನಲ್ಲಿ ಅವರು ವಾಸವಾಗಿದ್ದರು. ಮೇ 4ರಂದು ಕೆಲಸಕ್ಕೆ ರಜೆಯಿದ್ದ ಕಾರಣ ಇತರೆ ಕಾರ್ಮಿಕರ ಜೊತೆ ವಿಶ್ರಾಂತಿಯಲ್ಲಿದ್ದರು. ಮಧ್ಯಾಹ್ನ ಮೂತ್ರ ವಿಸರ್ಜನೆಗಾಗಿ ಹೊರಗೆ ಬಿದ್ದ ಅವರು ರಕ್ತದ ವಾಂತಿ ಮಾಡಿಕೊಂಡರು. ಕ0ಪನಿಯ ಸಿಬ್ಬಂದಿ ಹಾಗೂ ಇತರೆ ಕಾರ್ಮಿಕರು ಸೇರಿ ಮಮತಾಜ್ ಪೌಜಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಕಿಮ್ಸನ ತುರ್ತು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮಮತಾಜ್ ಪೌಜಿ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ನೇಣಿಗೆ ಶರಣಾದ ಕಾರ್ಮಿಕ
ಜೊಯಿಡಾದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವಿಶಾಲ ಹರಿಜನ್ ನೇಣಿಗೆ ಶರಣಾಗಿದ್ದಾರೆ. 22 ವರ್ಷದ ವಿಶಾಲ ಹರಿಜನ್ ಒಂದು ವರ್ಷದಿಂದ ಮಾನಸಿಕವಾಗಿ ಕುಗ್ಗಿದ್ದರು. ಅವರಿಗೆ ಸಾಕಷ್ಟು ಚಿಕಿತ್ಸೆ ನೀಡಿದರೂ ನಿತ್ಯ ಕೊರಗುತ್ತಿದ್ದರು. ಮೇ 5ರಂದು ಶ್ಯಾಮ ಜೊಯಿಡಾ ಗ್ರಾಮದ ಮನೆಯಲ್ಲಿದ್ದ ಅವರು ಹಾಲಿನಲ್ಲಿ ನೇಣಿಗೆ ಶರಣಾದರು. ಈ ಬಗ್ಗೆ ಅವರ ಸಹೋದರ ಸಾಗರ್ ಹರಿಜನ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.