ಶಿರಸಿ ನಗರಸಭೆಗೆ ಸೇರಿದ ಕಬ್ಬಿಣದ ಪೈಪು ಕಳ್ಳತನ ಬೆನ್ನಲ್ಲೆ ಇನ್ನೊಂದು ಕಬ್ಬಿಣದ ಹಗರಣ ಹೊರ ಬಂದಿದೆ. ಬನವಾಸಿ ಬಳಿ ಹರಿಯುವ ನೀರಿಗೆ ಸರ್ಕಾರ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಗೇಟುಗಳು ಕಳ್ಳರ ಪಾಲಾಗಿದೆ.
ಕಲ್ಕರಡಿ ಗ್ರಾಮದ ಬಾಂದಾರಿಗೆ ಅಳವಡಿಸಿದ್ದ ಕಬ್ಬಿಣದ ಗೇಟುಗಳನ್ನು ಕಳ್ಳರು ದೋಚಿದ್ದಾರೆ. ಇದರಿಂದ ನೀರಾವರಿ ಯೋಜನೆಗೆ ಸಮಸ್ಯೆಯಾಗಿದೆ. ಇಲ್ಲಿನ ನೀರಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ 30 ಗೇಟುಗಳನ್ನು ಅಳವಡಿಸಿತ್ತು. ಸದ್ಯ 8 ಗೇಟುಗಳ ಕಳ್ಳತನವಾಗಿದ್ದು, ಅದನ್ನು ಹುಡುಕಿಕೊಡುವಂತೆ ಅಧಿಕಾರಿಗಳು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.
ಮಾರ್ಚ 10ರಂದು ವಿವಿಧ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಆಗ ಎಲ್ಲಾ ಗೇಟ್ ಅಲ್ಲಿಯೇ ಇತ್ತು. ಮಾರ್ಚ 23ರಂದು ಏತ ನೀರಾವರಿ ಆಪರೇಟರ್ ಪ್ರಶಾಂತ ಅವರು ಅಲ್ಲಿ ಹೋದಾಗ ಗೇಟುಗಳು ಕಾಣೆಯಾಗಿದ್ದವು. ಪ್ರಶಾಂತ ಅವರು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ವಿಕಾಸ ನಾಯ್ಕ ಅವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು.
ವಿಕಾಸ ನಾಯ್ಕ ಅವರು ಸ್ಥಳಕ್ಕೆ ತೆರಳಿ ನೋಡಿದರು. ಅದಾದ ನಂತರ ಮೇಲಧಿಕಾರಿಗಳ ಜೊತೆ ಚರ್ಚಿಸಿದರು. ಒಂದು ತಿಂಗಳ ತರುವಾಯ ಕಬ್ಬಿಣದ ಗೇಟ್ ಕಳ್ಳತನದ ಬಗ್ಗೆ ಪೊಲೀಸ್ ದೂರು ನೀಡಿದರು. ಪ್ರತಿ ಗೇಟಿಗೆ 15 ಸಾವಿರ ರೂ ಬೆಲೆಯಿದ್ದು, 1.20 ಲಕ್ಷ ರೂ ಮೌಲ್ಯದ ಕಬ್ಬಿಣದ ಗೇಟಿಗಳು ಕಾಣೆಯಾದ ಬಗ್ಗೆ ಅವರು ದೂರಿದ್ದಾರೆ. ಬನವಾಸಿ ಪೊಲೀಸರು ಕಬ್ಬಿಣ ಕದ್ದ ಕಳ್ಳರ ಹುಡುಕಾಟ ನಡೆಸಿದ್ದಾರೆ.