ಶಿರಸಿಯ ಅಮೋಗ ಮೋಟರ್ಸ ಮ್ಯಾನೇಜರ್ ಆಗಿರುವ ಯಲ್ಲಾಪುರದ ಹರೀಶ ಹೆಗಡೆ ಅವರ ಕಾರು ಕಳ್ಳರ ಪಾಲಾಗಿದೆ.
ಯಲ್ಲಾಪುರದ ಕುಂದರಗಿಯ ಜಕ್ಕೊಳ್ಳಿ ದೊಡ್ಡಬೇಣದ ಹರೀಶ ಹೆಗಡೆ ಅವರು ಶಿರಸಿ ಕುರ್ಸೆ ಕಪೌಂಡ್ ಬಳಿ ವಾಸವಾಗಿದ್ದರು. ಅಲ್ಲಿನ 3ನೇ ಕ್ರಾಸಿನ ಬಳಿ ಮನೆ ಮಾಡಿಕೊಂಡಿದ್ದ ಅವರು ನಿತ್ಯ ತಮ್ಮ ಇಕೋ ಕಾರನ್ನು ಮನೆ ಮುಂದೆ ನಿಲ್ಲಿಸುತ್ತಿದ್ದರು.
ಮೇ 6ರಂದು ರಾತ್ರಿ 8.30ಕ್ಕೆ ಅವರು ಅಲ್ಲಿಯೇ ಕಾರು ನಿಲ್ಲಿಸಿ ಮನೆಗೆ ಹೋಗಿದ್ದರು. ಮರುದಿನ ಮಧ್ಯಾಹ್ನ ನೋಡಿದಾಗ ನಿಲ್ಲಿಸಿದ ಜಾಗದಲ್ಲಿ ಕಾರು ಕಾಣಲಿಲ್ಲ. 2-3ನೇ ಕ್ರಾಸಿನ ನಡುವಿನ ಜಾಗದಲ್ಲಿ ಅವರು ಕಾರಿನ ಹುಡುಕಾಟ ನಡೆಸಿದರು. ಆದರೆ, ಎಲ್ಲಿಯೂ ಕಾರು ಸಿಗಲಿಲ್ಲ.
ಕಾರಿನ ಚಾವಿ ತಮ್ಮ ಬಳಿಯೇ ಇದ್ದರೂ ಕಾರು ಕಾಣೆಯಾಗಿದ್ದು ಹೇಗೆ? ಎಂದು ಹರೀಶ ಹೆಗಡೆ ಅವರಿಗೆ ಅರಿವಾಗಲಿಲ್ಲ. ಎಲ್ಲಿ ಹುಡುಕಿದರೂ ಕಾರು ಸಿಗದ ಕಾರಣ ಅವರು ಪೊಲೀಸ್ ಠಾಣೆಗೆ ಹೋದರು.` ತಮ್ಮ ಕಾರು ಕದ್ದವನನ್ನು ಶಿಕ್ಷಿಸಿ’ ಎಂದು ದೂರು ನೀಡಿದರು.
ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಅವರ ಕಾರಿನ ಕಥೆ ಆಲಿಸಿ, ಪ್ರಕರಣ ದಾಖಲಿಸಿಕೊಂಡರು. ಇದೀಗ ಪೊಲೀಸರು ಇಕೋ ಕಾರಿನ ಹುಡುಕಾಟ ನಡೆಸಿದ್ದಾರೆ. ಕಾರು ಸಿಕ್ಕಿದ ತಕ್ಷಣ ಮರಳಿಸುವುದಾಗಿ ಭರವಸೆ ನೀಡಿದ್ದಾರೆ.