ಯಲ್ಲಾಪುರ ತಾಲೂಕಿನ ಅರಬೈಲ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟದ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಕ್ರಮಕ್ಕೆ ಮುಂದಾಗಿವೆ.
ಅಪಾಯ ಲೆಕ್ಕಿಸದೇ ನೀರಿಗಿಳಿದ ಪ್ರವಾಸಿಗರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಭಾನುವಾರ ಜು.13 ರಂದು ಅರಬೈಲ್ ಜಲಪಾತ ವೀಕ್ಷಣೆಗೆ ಬಂದ ಧಾರವಾಡದ ಪ್ರವಾಸಿಗರು, ಅರಣ್ಯ ಇಲಾಖೆಯ ಸಿಬ್ಬಂದಿಯ ಎಚ್ಚರಿಕೆಯ ಮಾತನ್ನೂ ಲಕ್ಷಿಸದೇ ನೀರಿಗಿಳಿದಿದ್ದರು. ಅದೇ ವೇಳೆ ನೀರಿನ ಪ್ರಮಾಣ ಏಕಾಏಕಿ ಹೆಚ್ಚಿತ್ತು. ಸ್ಥಳೀಯರ ನೆರವಿನಿಂದ ಅಪಾಯದಿಂದ ಪಾರಾಗಿ ಬಂದಿದ್ದರು.
ತಮ್ಮ ಪ್ರಾಣಾಪಾಯವನ್ನೂ ನಿರ್ಲಕ್ಷಿಸಿ ನೀರಿಗಿಳಿದ ಪ್ರವಾಸಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರವಾಸೀ ತಾಣದ ನಿಯಮಗಳನ್ನು ಪಾಲಿಸದೇ, ಫೊಟೊ, ವಿಡಿಯೊ, ರೀಲ್ಸ್ ಗಾಗಿ ಹುಚ್ಚಾಟ ನಡೆಸುವ ಪ್ರವಾಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ಮತ್ತೊಂದೆಡೆ ಅರಣ್ಯ ಇಲಾಖೆ ಜಲಪಾತದ ದಾರಿಯಲ್ಲಿ ತಂತಿಬೇಲಿ ಅಳವಡಿಸಿದೆ. ಜಲಪಾತಕ್ಕೆ ಪ್ರವಾಸಿಗರು ಹೋಗದಂತೆ ನಿರ್ಬಂಧ ವಿಧಿಸಿದೆ.