ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾ.ಪಂ ಸದಸ್ಯ ಜಿ.ಆರ್.ಭಾಗ್ವತ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ರಾಜ್ಯ ಪಂಚಾಯತರಾಜ್ ಇಲಾಖೆಯ ಸಮ್ಮುಖದಲ್ಲಿ ಸಕ್ಷಮ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.
ಜಿ.ಆರ್.ಭಾಗ್ವತ ಅವರು ಪಂಚಾಯಿತಿಯ ಸದಸ್ಯರಾಗಿದ್ದು, 2010 ರಿಂದ 2019 ರ ಅವಧಿಯಲ್ಲಿ ಅವರ ಮಗ ಶ್ರೀರಾಮ ಭಾಗ್ವತ ಗುತ್ತಿಗೆದಾರನಾಗಿ ಗ್ರಾ.ಪಂ ವ್ಯಾಪ್ತಿಯಲ್ಲಿ 8.21 ಲಕ್ಷ ರೂ ಮೊತ್ತದ ಕಾಮಗಾರಿ ನಡೆಸಿದ್ದಾರೆ. ಇದು ನಿಯಮ ಬಾಹಿರವಾಗಿದ್ದು, ಸ್ಥಳೀಯರ ದೂರಿನನ್ವಯ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ನಂತರ ಈ ಆದೇಶ ಹೊರಡಿಸಲಾಗಿದೆ.
ರಾಜಕೀಯ ದ್ವೇಷದ ಆರೋಪ:
ತಮ್ಮ ಗ್ರಾ.ಪಂ ಸದಸ್ಯತ್ವ ರದ್ದತಿಗೆ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಗಜಾನನ ಭಟ್ಟ ಅವರ ದ್ವೇಷದ ರಾಜಕಾರಣವೇ ಕಾರಣ ಎಂದು ಜಿ.ಆರ್.ಭಾಗ್ವತ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಜಾನನ ಭಟ್ಟ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಮೂರನೇ ಅವಧಿಗೆ ಗ್ರಾ.ಪಂ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಅಗತ್ಯ ಕೆಲಸಗಳು ಸಮರ್ಪಕವಾಗಿ ನಡೆಯಲೆಂದು ಆ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗಜಾನನ ಭಟ್ಟರೂ ಪ್ರೋತ್ಸಾಹಿಸಿಯೇ ಶ್ರೀರಾಮ ಭಾಗ್ವತ ಕೆಲಸ ನಿರ್ವಹಿಸಿದ್ದಾರೆ. ನನ್ನ ಮಗನಿಗೇ ಗುತ್ತಿಗೆ ಕೆಲಸ ನೀಡುತ್ತಿರುವಾಗಲೇ ನಾನು ಅದನ್ನು ವಿರೋಧಿಸಿದ್ದೆ. ನಂತರದ ದಿನಗಳಲ್ಲಿ ಕಾಮಗಾರಿ ನೀಡುವುದನ್ನು ನಿಲ್ಲಿಸಲಾಗಿದೆ. ಗ್ರಾ.ಪಂ ವ್ಯಾಪ್ತಿಯ ಅಭಿವೃದ್ಧಿಗೆ ಬಳಸಿಕೊಂಡು, ನಂತರ ದ್ವೇಷ ಸಾಧನೆಗೆ, ವಿಶ್ವಾಸದ್ರೋಹ ಮಾಡಲು ಗಜಾನನ ಭಟ್ಟ ಮುಂದಾಗಿದ್ದಾರೆ. ಅವರ ಸರ್ವಾಧಿಕಾರಿ ಧೋರಣೆ ವಿರೋಧಿಸಿದ್ದಕ್ಕಾಗಿ ದ್ವೇಷ ಸಾಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸ್ಥಳೀಯವಾಗಿ ತನಿಖೆ ನಡೆಸುವ ಅಧಿಕಾರಿಗಳು ನನ್ನ ಹೇಳಿಕೆಯನ್ನೂ ಪಡೆದಿರಲಿಲ್ಲ. ನಂತರ ಬೆಳಗಾವಿಯ ಆಯುಕ್ತರೆದುರು ಹೇಳಿಕೆ ನೀಡಿ ಬಂದಿದ್ದೇನೆ. ಆದರೂ ನನ್ನ ಸದಸ್ಯತ್ವ ರದ್ದು ಮಾಡಿ ಆದೇಶಿಸಲಾಗಿದೆ. ಈ ಆದೇಶ ಕಾನೂನು ಬಾಹಿರವಾಗಿದೆ. ಆದೇಶ ಪತ್ರ ನನಗೆ ಇನ್ನೂ ತಲುಪಿಲ್ಲ. ಆದೇಶಕ್ಕೂ ಮುನ್ನವೇ ಕೆವಿಟ್ ಹಾಕಲಾಗಿದೆ. ಇದರಿಂದ ಎಚ್ಚೆತ್ತ ತಾವು, ಹೈಕೋರ್ಟ್ ನ ಮೊರೆ ಹೋಗಿದ್ದು, ಅನರ್ಹತೆಗೆ ತಡೆಯಾಜ್ಞೆ ನೀಡಿದೆ ಎಂದರು.
ಪಂಚಾಯತರಾಜ್ ಅಧಿನಿಯಮ 43 ಎ ಅನ್ವಯ ಸದಸ್ಯತ್ವ ರದ್ದುಪಡಿಸಲಾಗಿದೆ. ಇದು ನಿಯಮಬಾಹಿರವಾಗಿದೆ. ಇದು ಕೇವಲ ಹಿಂದಿನ ಅವಧಿಯಲ್ಲಿ ಮಾಡಿದ ಕಾಮಗಾರಿಗಳಾಗಿದ್ದು, ಹಣಕಾಸಿ ಭ್ರಷ್ಟಾಚಾರ ಅಲ್ಲ. ಕೇವಲ ನಿಯಮ ಉಲ್ಲಂಘನೆಯಾಗಿರುವುದರಿಂದ ಹಿಂದಿನ ಅವಧಿಯಲ್ಲಿನ ಕಾಮಗಾರಿಗಳ ವಿಚಾರಕ್ಕೆ ಈ ಅವಧಿಯಲ್ಲಿ ಸದಸ್ಯತ್ವ ರದ್ದು ಮಾಡಲು ನಿಯಮಾನುಸಾರ ಅವಕಾಶವಿಲ್ಲ ಎಂದು ಸಮರ್ಥಿಸಿಕೊಂಡರು.
ಮುಂದಿನ ದಿನಗಳಲ್ಲಿ ಕಾನೂನು ಹೋರಾಟವನ್ನು ಮುಂದುವರಿಸಿ, ನ್ಯಾಯ ಪಡೆಯುತ್ತೇನೆ ಎಂದರು.
ಗ್ರಾ.ಪಂ ಅಧ್ಯಕ್ಷ ಭಗೀರಥ ನಾಯ್ಕ ಮಾತನಾಡಿ, ಗಜಾನನ ಭಟ್ಟ ಅವರು ನಾನು ಅಧ್ಯಕ್ಷನಾಗಲು ಬೆಂಬಲಿಸಿ, ನನ್ನನ್ನೇ ಹಿಮ್ಮೆಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಯಾರೇ ಅಧ್ಯಕ್ಷರಾದರೂ ತಾನು ಹೇಳಿದಂತೆ ನಡೆಯಬೇಕೆನ್ನುವ ಮನೋಭಾವ ಅವರದಾಗಿದೆ ಎಂದು ಆರೋಪಿಸಿದರು.