ಯಲ್ಲಾಪುರ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅಂಗಡಿ ಸಂಕೀರ್ಣ, ಸಮುದಾಯ ಭವನವನ್ನೊಳಗೊಂಡ 3.26 ಕೋಟಿ ರೂ ವೆಚ್ಚದ ನೂತನ ಕಟ್ಟಡ ನಿರ್ಮಾಣದ ಕುರಿತು ಅಧ್ಯಕ್ಷ ಹೊಸ್ಕೇರಿ ಪ್ರಸ್ತಾಪಿಸಿ, ನೀಲನಕ್ಷೆ, ರೂಪುರೇಷೆಗಳನ್ನು ಸಭೆಯ ಮುಂದಿಟ್ಟರು. ಇದಕ್ಕೆ ಸರ್ವಾನುಮತದಿಂದ ಅನುಮೋದನೆ ದೊರೆಯಿತು. ಕಟ್ಟಡ ಕಾಮಗಾರಿ ಆರಂಭದ ಹೊಣೆಯನ್ನು ಅಧ್ಯಕ್ಷರಿಗೆ ನೀಡಲಾಯಿತು.
ಖಜಾಂಚಿ ವಿಶಾಲ ನಾಯಕ ಕಳೆದ ಸಾಲಿನ ಆಯವ್ಯಯ ಮಂಡಿಸಿ, ಕಳೆದ ಮಾರ್ಚ್ ಅಂತ್ಯಕ್ಕೆ ಸಂಘದಲ್ಲಿ 29 ಲಕ್ಷ ರೂ ಜಮಾ ಇರುವುದಾಗಿ ಮಾಹಿತಿ ನೀಡಿದರು. ಸರ್ಕಾರಿ ನೌಕರರ ಸಂಘದ ಈಗಿನ ಕಾರ್ಯಾಲಯವನ್ನು ನವೀಕರಿಸಲು ಸಭೆ ಅನುಮೋದನೆ ನೀಡಿತು.
ಪ್ರತಿಭಾ ಪುರಸ್ಕಾರ, ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ನೌಕರರಿಗೆ ಅಭಿನಂದನಾ ಕಾರ್ಯಕ್ರಮ ಆಯೋಕನೆ ಸೇರಿದಂತೆ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಬಗೆಗೆ ಚರ್ಚಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ನಾರಾಯಣ ನಾಯಕ, ರಾಮಚಂದ್ರ ಉಳ್ವೇಕರ್, ಮಂಜುನಾಥ ಆಗೇರ, ರಾಜ್ಯ ಪರಿಷತ್ ಸದಸ್ಯೆ ರೇಷ್ಮಾ ಶೇಟ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಸಂಘದ ನಿರ್ದೇಶಕ ಸಂತೋಷ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಶರಣಪ್ಪ ಗೊಜನೂರ ವರದಿ ವಾಚಿಸಿದರು. ಜಂಟಿ ಕಾರ್ಯದರ್ಶಿಗಳಾದ ವಿ.ಪಿ.ಭಟ್ಟ ಕೋಣೆಮನೆ ನಿರ್ವಹಿಸಿದರು. ಮಹೇಶ ತಾಳಿಕೋಟಿ ವಂದಿಸಿದರು.