ಯಲ್ಲಾಪುರ ತಾಲೂಕಿನ ಹುಲಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ, ಭತ್ತದ ಸಸಿಗಳನ್ನು ನಾಟಿ ಮಾಡಿ, ಕೃಷಿಯ ಅನುಭವ ಪಡೆದರು.
ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿರುವ ‘ಸೀನ ಸೆಟ್ಟರು ನಮ್ಮ ಟೀಚರು’ ಎಂಬ ಪಾಠದ ಬೋಧನೆಯ ಅಂಗವಾಗಿ ಈ ಚಟುವಟಿಕೆ ನಡೆಸಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನು ಶಾಲೆಯ ಸಮೀಪದ ಉದಯ ಮರಾಠಿ ಎನ್ನುವವರ ಗದ್ದೆಗೆ ಕರೆದುಕೊಂಡು ಹೋಗಿ, ಭತ್ತ ಬೆಳೆಯುವ ವಿಧಾನ, ಗದ್ದೆ ನಾಟಿ, ಅದಕ್ಕೆ ಬೇಕಾಗುವ ಪೂರ್ವ ಸಿದ್ಧತೆ ಹಾಗೂ ಎದುರಾಗುವ ತೊಂದರೆಗಳ ಕುರಿತು ವಿವರಿಸಲಾಯಿತು.
ಒಂದು ಕಾಳು ಭತ್ತ ಬೆಳೆಯಲು ಬೇಕಾಗುವ ಸಮಯ ಮತ್ತು ಅಕ್ಕಿಯನ್ನು ಪಡೆಯಲು ಈಗಿನ ಕಾಲದಲ್ಲಿ ಇರುವ ಸಮಸ್ಯೆಗಳ ಕುರಿತು ರೈತ ಉದಯ ಮರಾಠಿ ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೇರಿ ಭತ್ತದ ನಾಟಿ ಮಾಡಿದರು.
ವಿಷಯ ಶಿಕ್ಷಕಿ ಗಣಪಿ ಗೌಡ ನೇತೃತ್ವದಲ್ಲಿ ಎಲ್ಲ ವಿದ್ಯಾರ್ಥಿಗಳು ಆಹಾರವನ್ನು ಪೋಲು ಮಾಡದೇ ಇರುವುದಾಗಿ ಪ್ರತಿಜ್ಞೆ ಮಾಡಿ, ಶಾಲೆಗೆ ಮರಳಿದರು.