ಯಲ್ಲಾಪುರದ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಸಾಮಾನ್ಯ ಸಭೆ ಎಂದಿನಂತೆ ಮಾರುಕಟ್ಟೆಯ ಗದ್ದಲ, ಗೊಂದಲದಂತೆಯೇ ನಡೆಯಿತು.
ಪಪಂ ಆಡಳಿತವನ್ನು ಸರಿಯಾಗಿ ನಡೆಸಲು ಆಗದೇ ಇದ್ದಲ್ಲಿ ಕೆಳಗೆ ಇಳಿಯಿರಿ ಎಂದು ಅಧ್ಯಕ್ಷರಿಗೆ ಸದಸ್ಯ ಸೋಮು ನಾಯ್ಕ ಹೇಳಿದಾಗ, ಆಡಳಿತ ಸಮಿತಿಯ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಡಳಿತವನ್ನು ಯಾರು ಹಾಳು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಅವರನ್ನು ಇಳಿಸುವುದಕ್ಕೆ, ಏರಿಸುವುದಕ್ಕೆ ನಾವು ಇದ್ದೇವೆ. ಆದರೆ ನೀವು ಹಾಗೇ ಹೇಳುವುದು ಅರಿಯಲ್ಲ ಎಂದು ಸದಸ್ಯ ರಾಧಾಕೃಷ್ಣ ನಾಯ್ಕ ಸಹ ಗರಂ ಆದರು.
ಸದಸ್ಯ ಸತೀಶ ನಾಯ್ಕ ಮಾತನಾಡಿ, ನಿಮ್ಮದೇ ಪಕ್ಷದ ತಾಲೂಕು ಅಧ್ಯಕ್ಷರು, ಎಂ.ಎಲ್.ಸಿ ಅವರಿಗೇ ಗೌರವ ಕೊಡದ ನೀವು, ಪ.ಪಂ ಅಧ್ಯಕ್ಷರ ಆಡಳಿತ ಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಎಂದು ಸೋಮು ನಾಯ್ಕ ಅವರನ್ನು ಛೇಡಿಸಿದರು.
ಬಿಲ್ಲಿಗದ್ದೆ ರಸ್ತೆ ನಿರ್ವಹಣೆಗೆ ಅನುದಾನ ಕೇಳಿದರೆ ಪಪಂ ನಲ್ಲಿ ಅನುದಾನ ಇಲ್ಲ ಎಂದು ಮುಖ್ಯಾಧಿಕಾರಿ ಲಿಖಿತವಾಗಿ ತಿಳಿಸಿದ್ದಾರೆ. ಆದರೆ ಬೇರೆ ವಾರ್ಡ್ ಗಳ ಕಾಮಗಾರಿಗೆ ಭರಪೂರ ಕ್ರಿಯಾ ಯೋಜನೆ ಆಗುತ್ತಿದೆ. ನಮಗೇಕೆ ಈ ಅನ್ಯಾಯ ಮಾಡಿದ್ದೀರಿ ಎಂದು ಸದಸ್ಯ ರಾಜು ನಾಯ್ಕ ಆಕ್ಷೇಪಿಸಿದರು.
ಕಳೆದ ಜಾತ್ರೆ ಅಂಗಡಿ ಹರಾಜು ವಿಷಯದಲ್ಲಿ ನಡೆದ 11 ಲಕ್ಷ ರೂ ಅವ್ಯವಹಾರದ ಕುರಿತು ಇಲಾಖಾ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಸದಸ್ಯ ಸತೀಶ ನಾಯ್ಕ ಹೇಳಿದರು. ಸಭೆಯಲ್ಲೇ ಸದಸ್ಯರ ಸಹಿ ಸಂಗ್ರಹಿಸಿದರು.
ಲೋಕೋಪಯೋಗಿ ಇಲಾಖೆಯ ದರಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಂಡು ನೀರು, ಪೈಪ್ ಲೈನ್ ಕಾಮಗಾರಿಯ ಕೊಟೇಷನ್ ಹೆಸರಿನಲ್ಲಿ ಸಭೆಯ ಅನುಮೋದನೆ ಪಡೆಯಲು ಮುಂದಾಗಿದ್ದೀರಿ. ನಾವೇನು ಕುರಿಗಳಾ ಎಂದು ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಅವರು, ಇಂಜನಿಯರ್ ಹೇಮಚಂದ್ರ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ, ನಿಮ್ಮ ಮಾತಿಗೆ ನನ್ನ ಉತ್ತರ ಇಲ್ಲ ಎಂದರು.