ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆಗೆ ಕಾರಣರಾದ ಉಗ್ರರನ್ನು ಭಾರತೀಯ ಸೇನೆಯು ಬಡಿದುರುಳಿಸಿದೆ. ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ಕುಟುಂಬದವರು ಭಾರತೀಯ ಸೇನೆಯ ಆಪರೇಷನ್ ಮಹಾದೇವ ಕಾರ್ಯಾಚರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ್ ಅವರ ಕುಟುಂಬಸ್ಥ ಡಾ. ರವಿ ಕಿರಣ್, ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿ ಮೋದಿ ಅವರು ಈ ಕಾರ್ಯಾಚರಣೆಗೆ ‘ಆಪರೇಷನ್ ಮಹಾದೇವ’ ಎಂಬ ಹೆಸರನ್ನು ನೀಡಿ, ಹೆಸರಿಗೆ ತಕ್ಕಂತೆ ಉಗ್ರರಿಗೆ ಶಿಕ್ಷೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸೇನೆಯ ಈ ಕೆಲಸ ನಮಗೆ ಖುಷಿ ತಂದಿದೆ. ಮೃತ ಆತ್ಮಕ್ಕೂ ಸದ್ಗತಿ ದೊರಕಲಿದೆ ಎಂಬ ವಿಶ್ವಾಸ ನಮ್ಮದು ಎಂದರು.