ಯಲ್ಲಾಪುರ ತಾಲೂಕಿನ ಗುಳ್ಳಾಪುರ ಹಾಗೂ ಅಂಕೋಲಾ ತಾಲೂಕಿನ ಹೆಗ್ಗಾರ, ಕಲ್ಲೇಶ್ವರ ಭಾಗವನ್ನು ಸಂಪರ್ಕಿಸುವ ನೂತನ ಸೇತುವೆ ಸದ್ಯದಲ್ಲೇ ಮಂಜೂರಾಗಲಿದೆ.
ಈ ವಿಷಯವನ್ನು ಸ್ವತಃ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ. ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಶೀಘ್ರ ಅನುಮೋದನೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
“2021ರಲ್ಲಿ ಉಂಟಾದ ಅತೀವ ಮಳೆಯಿಂದಾಗಿ ಸುಮಾರು ಮೂವತ್ತು ವರ್ಷಗಳ ಕಾಲ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕನ್ನು ಬೆಸೆಯುತ್ತಿದ್ದ ಗುಳ್ಳಾಪುರ ಸೇತುವೆ ಕೊಚ್ಚಿಹೋಗಿತ್ತು. ತಾತ್ಕಾಲಿಕ ಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಿದರೂ ಜನತೆಗೆ ಶಾಶ್ವತ ಪರಿಹಾರ ಅಗತ್ಯವಾಗಿತ್ತು. ಇದೀಗ ನೂತನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆಯನ್ನು ತೋರಿಸಲಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿಗಳು ನೂತನ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕವಾಗಿ ಅಧಿಕೃತ ಆದೇಶ ನೀಡಲಿದ್ದಾರೆ,” ಎಂದು ಹೆಬ್ಬಾರ ಮಾಹಿತಿ ನೀಡಿದ್ದಾರೆ.
ಕಾರವಾರ ಶಾಸಕ ಸತೀಶ್ ಸೈಲ್ ಅವರೂ ಈ ಯೋಜನೆಯ ಮಂಜೂರಾತಿಗಾಗಿ ಸಹಕಾರ ನೀಡಿದ್ದಾರೆ. ಈ ಸೇತುವೆಯು ಎರಡೂ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಶೀಘ್ರದಲ್ಲಿಯೇ ಸೇತುವೆ ನಿರ್ಮಾಣದ ಆದೇಶದ ಶುಭ ಸುದ್ದಿಯನ್ನು ಎರಡು ತಾಲೂಕಿನ ಜನತೆಗೆ ನೀಡಲಿದ್ದೇವೆ ಎಂದಿದ್ದಾರೆ.