ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಜೋಡಿ ಮಾರ್ಗ ಮಂಜೂರಾಗಿದ್ದು, ನಾಗರಿಕ ವೇದಿಕೆಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದರು.
ಯಲ್ಲಾಪುರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಇದಾದರೂ, ಹುಬ್ಬಳ್ಳಿಯಲ್ಲಿ, ಅಂಕೋಲಾದಲ್ಲಿ ಮೊದಲೇ ರೈಲ್ವೆ ಇದೆ. ಆದರೆ ಮಧ್ಯದಲ್ಲಿರುವ ಯಲ್ಲಾಪುರಕ್ಕೆ ಇನ್ನೂ ರೈಲು ಬಂದಿಲ್ಲ. ರೈಲ್ವೆ ಯೋಜನೆಗಾಗಿ 3-4 ವರ್ಷಗಳಿಂದ ನಾಗರಿಕ ವೇದಿಕೆ ಪ್ರಯತ್ನಿಸುತ್ತಿದೆ. ಇದು ಈಗ ಫಲ ಕೊಟ್ಟಿದೆ ಎಂದ ಅವರು, ಯೋಜನೆಯ ಮಂಜೂರಿಗೆ ಕಾರಣರಾದ ಎಲ್ಲ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಶೀಘ್ರದಲ್ಲಿ ಅದು ಆರಂಭವಾಗಬೇಕು. 25 ವರ್ಷಗಳ ನಿರೀಕ್ಷೆ ಈಡೇರುವ ಕಾಲ ಬಂದಿದೆ. ರೈಲ್ವೆ ಯೋಜನೆಯಿಂದ ಯಲ್ಲಾಪುರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಈ ಯೋಜನೆಗೆ ಈವರೆಗೆ ಅಡ್ಡಗಾಲು ಹಾಕಿದ್ದ ಪರಿಸರ ಹೋರಾಟಗಾರರು ಇನ್ನಾದರೂ ಹೋರಾಟ ನಿಲ್ಲಿಸಬೇಕು. ಯೋಜನೆ ಸುರಳೀತವಾಗಿ ಆಗುವಂತೆ ಅವಕಾಶ ಮಾಡಿಕೊಡಬೇಕು.ಯೋಜನೆಗೆ ಮತ್ತೆ ಅಡ್ಡಗಾಲು ಬಂದರೆ ವೇದಿಕೆ ಹೋರಾಟ ಮುಂದುವರಿಸಲಿದೆ ಎಂದರು.
ನಾಗರಿಕ ವೇದಿಕೆಯ ಸದಸ್ಯರಾದ ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಡಿ.ಜಿ.ಹೆಗಡೆ ಉಪಸ್ಥಿತರಿದ್ದರು.