ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ ನಮ್ಮ ಮೊದಲ ಮತ್ತು ಅತಿ ಮುಖ್ಯವಾದ ಹೆಜ್ಜೆ ಗುರಿ ನಿಗದಿಪಡಿಸುವುದಾಗಿರಬೇಕು. ನಿರ್ದಿಷ್ಟ ಗುರಿಗಳಿಲ್ಲದ ಜೀವನವು ದಿಕ್ಸೂಚಿಯಿಲ್ಲದ ಹಡಗಿನಂತೆ ಆಗುತ್ತದೆ. ನಿಖರವಾದ ಗುರಿಗಳು ನಮ್ಮ ಪ್ರಯತ್ನಗಳಿಗೆ ಒಂದು ಸ್ಪಷ್ಟವಾದ ದಿಕ್ಕನ್ನು ನೀಡುತ್ತವೆ ಮತ್ತು ನಮ್ಮ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ವ್ಯಯಿಸಲು ಸಹಾಯ ಮಾಡುತ್ತವೆ.
ನಮ್ಮ ಗುರಿ ಏನೇ ಇರಲಿ ಅದು ವೈಯಕ್ತಿಕ ಬೆಳವಣಿಗೆಯಾಗಿರಲಿ, ವೃತ್ತಿಜೀವನದ ಸಾಧನೆಯಾಗಿರಲಿ ಅಥವಾ ಶೈಕ್ಷಣಿಕ ಉನ್ನತಿಯಾಗಿರಲಿ ಅದನ್ನು ನಿರ್ದಿಷ್ಟವಾಗಿ ವ್ಯವಸ್ಥಿತ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ‘ನಾನು ಬದುಕಿನಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಬೇಕು’ ಎನ್ನುವುದರ ಜೊತೆಗೆ ‘ನಾನು ಪ್ರತಿದಿನ ಒಂದು ಗಂಟೆ ಓದಿ ಹೊಸ ವಿಷಯಗಳನ್ನು ಕಲಿಯಬೇಕು’ ಆ ಮೂಲಕ ‘ನನ್ನ ಬದುಕಿಗೆ ಹೊಸ ಅರ್ಥ ನೀಡಬೇಕು’ ಎಂದು ಹೇಳುವುದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ನಾವು ಆಯ್ಕೆ ಮಾಡಿಕೊಂಡ ಗುರಿಗಳು ವಾಸ್ತವಿಕವಾಗಿರಬೇಕು, ಆದರೆ ಅದೇ ಸಮಯದಲ್ಲಿ ಆ ಗುರಿಗಳು ನಮ್ಮನ್ನು ಎಂತದೇ ಸವಾಲುಗಳಿಗೂ ಒಡ್ಡಿಕೊಳ್ಳುವಂತಿರಬೇಕು.
ಒಮ್ಮೆ ನಮ್ಮ ಗುರಿಯನ್ನು ನಿಗದಿಪಡಿಸಿದ ನಂತರ ನಾವು ಅದರತ್ತ ಸಂಪೂರ್ಣ ಗಮನ ಹರಿಸುವುದು ಬಹಳ ಮುಖ್ಯ. ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ನಕಾರಾತ್ಮಕ ಅಂಶಗಳಿಂದ ದೂರವಿರುವುದು ಅಷ್ಟೇ ಅವಶ್ಯಕವೂ ಹೌದು. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಮತ್ತು ಅಧ್ಯಯನದ ಸ್ಥಳವನ್ನು ಅಡೆತಡೆಗಳಿಲ್ಲದಂತೆ ಅಳವಡಿಸಿಕೊಳ್ಳುವುದು ನಮ್ಮ ಮೊದಲ ಜವಾಬ್ದಾರಿಯಾಗಬೇಕು. ಪ್ರತಿ ದಿನವೂ ನಮ್ಮ ಗುರಿಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು. ನಮ್ಮ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು. ಬದುಕಿನಲ್ಲಿ ಸಣ್ಣ ಗುರಿಗಳನ್ನು ಸಾಧಿಸಿದಾಗ ನಮ್ಮನ್ನು ನಾವೇ ಮೊದಲು ಪ್ರೋತ್ಸಾಹಿಸಿಕೊಳ್ಳುವುದು ನಮಗೆ ವೈಯಕ್ತಿಕವಾಗಿ ಮತ್ತಷ್ಟು ಸ್ಫೂರ್ತಿ ನೀಡುತ್ತದೆ.
ಯಾವುದೇ ಸವಾಲುಗಳು ಎದುರಾದಾಗಲೋ ಅಥವಾ ಯಾವುದೋ ಕಾರಣಕ್ಕೆ ಜೀವನದಲ್ಲಿ ಹತಾಶೆಗೊಂಡಾಗ ನಮ್ಮ ಗುರಿಯನ್ನು ನೆನಪಿಸಿಕೊಳ್ಳುವುದು. ನಾನು ಈ ಗುರಿಯನ್ನು ಏಕೆ ಆರಿಸಿಕೊಂಡೆ, ಅದು ನನ್ನ ಜೀವನಕ್ಕೆ ಹೇಗೆ ಅರ್ಥ ನೀಡುತ್ತದೆ ಎಂಬುದನ್ನು ಮರುಪರಿಶೀಲಿಸಿಕೊಳ್ಳಬೇಕು.
ನಮ್ಮ ದೃಷ್ಟಿಯನ್ನು ನಮ್ಮ ಅಂತಿಮ ಗುರಿಯ ಮೇಲೆ ಇರಿಸುವುದರಿಂದ, ತಾತ್ಕಾಲಿಕ ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. ದೃಢ ಸಂಕಲ್ಪ ಮತ್ತು ನಿರಂತರ ಗುರಿಯೆಡೆಗೆ ಗಮನ ನಮ್ಮ ಗುರಿಗಳನ್ನು ತಲುಪಲು ಪ್ರಮುಖ ಅಸ್ತçಗಳಾಗಿವೆ. ಹೀಗೆ ನಾವು ಒಂದು ಗುರಿಯನ್ನು ನಿಗದಿಪಡಿಸಿದಾಗ ಮಾತ್ರ ಅದನ್ನು ತಲುಪುವ ಪ್ರಯಾಣ ಆರಂಭವಾಗುತ್ತದೆ.
– ರವಿ ಶೇಷಗಿರಿ
ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ ಕಾಲೇಜು ಯಲ್ಲಾಪುರ