ಕಳೆದ ಗ್ರಾಮದೇವಿ ಜಾತ್ರೆಯ ಅಂಗಡಿ ಹರಾಜಿನಲ್ಲಿ 11 ಲಕ್ಷ ರೂ ಅವ್ಯವಹಾರವಾಗಿದೆ. ಇದರಲ್ಲಿ ಕೆಲವು ಸದಸ್ಯರೂ ಶಾಮೀಲಾಗಿದ್ದಾರೆ. ಆದರೆ ಕೇವಲ ಅಧಿಕಾರಿಗಳ ಮೇಲೆ ಮಾತ್ರ ಅವ್ಯವಹಾರದ ಹೊಣೆ ಹೊರಿಸಿ, ಅವರನ್ನು ತಪ್ಪಿತಸ್ಥರನ್ನಾಗಿಸಲಾಗುತ್ತಿದೆ.
ಪಟ್ಟಣ ಪಂಚಾಯಿತಿಯ ಸದಸ್ಯ ಸೋಮೇಶ್ವರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದಾರೆ. ಶಾಸಕರೊಂದಿಗೆ ಬಂದ ಕೆಲವು ಸದಸ್ಯರು ಹರಾಜಿನಲ್ಲಿ ಭಾಗವಹಿಸಿ, ಅಂಗಡಿ ಪಡೆದವರಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಆದರೂ ಅವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕೇವಲ ಅಧಿಕಾರಿಗಳ ಮೇಲೆ ಮಾತ್ರ ಅಲ್ಲ. ಹಗರಣದಲ್ಲಿ ಶಾಮೀಲಾಗಿರುವ ಸದಸ್ಯರ ಮೇಲೂ ಕ್ರಮ ಆಗಬೇಕೆಂದು ಒತ್ತಾಯಿಸಿದರು.
ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಜಾತ್ರಾ ಅಂಗಡಿ ಹರಾಜು ಅವ್ಯವಹಾರ ತನಿಖೆ ಆಗಬೇಕು. ಈ ಬಗ್ಗೆ ಶಾಸಕರು 15 ದಿನಗಳಲ್ಲಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಜುನಾಥ ನಗರ ವಾರ್ಡಿನಲ್ಲಿ ಜಿ+2 ಮನೆಗಳ ನಿರ್ಮಾಣ ಆಗಿ ವರ್ಷ ಕಳೆದರೂ ವಿತರಣೆಯಾಗಿಲ್ಲ. ಕೊಳಚೆ ನಿರ್ಮೂಲನಾ ಮಂಡಳಿಯೇ ಜಿಪ್ಲಸ್ ಟು ಮನೆಯ ಪ್ರದೇಶದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಬೇಕು. ಆದರೆ ಆ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಎಸ್.ಸಿ ಎಸ್ ಟಿ ಅನುದಾನವನ್ನು ಬಳಸಲಾಗಿದೆ ಎಂದು ಆರೋಪಿಸಿದರು.
ಪ.ಪಂ ಸದಸ್ಯೆ ಶ್ಯಾಮಿಲಿ ಪಾಟಣಕರ್, ಪಕ್ಷದ ಪ್ರಮುಖರಾದ ವಿನೋದ ತಳೆಕರ್,ರಜತ್ ಬದ್ದಿ,ರವಿ ದೇವಾಡಿಗ,ನಾಗೇಶ ಯಲ್ಲಾಪುರಕರ್ ಇದ್ದರು.