ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ, ಬಿಜೆಪಿ ಮುಖಂಡ ರಾಮು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಗಣೇಶ ಹಬ್ಬವನ್ನು ನಿಮ್ಮ ಪುರಾತನ ಪದ್ಧತಿಯಂತೆ ಆಚರಿಸುವುದನ್ನು ಬಿಡಿ, ಆಚರಿಸುವದಿದ್ದರೆ ಪರಿಸರ ಮಂಡಳಿ ಹೇಳಿದಂತೆ ಆಚರಣೆ ಮಾಡಿ’. ಇದು ಶತ ಶತಮಾನಗಳಿಂದ ಹಿಂದುಗಳು ಆಚರಿಸಿಕೊಂಡು ಬರುತ್ತಿರುವ ಗಣೇಶ ಹಬ್ಬಕ್ಕೆ, ಕರ್ನಾಟಕದ ಘನ ಸರಕಾರ ಈ ವರ್ಷ ಹಾಕಿರುವ ಹೊಸ ಷರತ್ತು.
ಇಲ್ಲಿಯವರೆಗೆ, ಪಿಓಪಿ ಗಣೇಶನನ್ನು ಪ್ರತಿಷ್ಠಾಪಿಸಬಾರದು, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು, ಅನುಮತಿ ಪಡೆಯದೇ ಪೆಂಡಾಲ ಹಾಕಬಾರದು, ನಿರ್ದಿಷ್ಟ ಪಡಿಸಿದ ನೀರಿನ ಹೊಂಡಗಳನ್ನು ಹೊರತುಪಡಿಸಿ ಬೇರೆ ಕಡೆ ಮಂಗಲಮೂರ್ತಿ ವಿಸರ್ಜಿಸಬಾರದು ಇತ್ಯಾದಿ ಕರಾರುಗಳನ್ನು ನಾವು ಕೇಳಿ, ಒಪ್ಪಿಕೊಂಡದ್ದೂ ಆಯಿತು. ಈ ವರ್ಷ ಇನ್ನೂ ಕೆಲವು ಷರತ್ತುಗಳನ್ನು ವಿಧಿಸಿದೆ.
ಇನ್ನು ಮುಂದೆ ಸಾರ್ವಜನಿಕರು ಬಣ್ಣರಹಿತ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಮೂರ್ತಿಯ ಎತ್ತರ ಐದು ಅಡಿ ಮೀರಬಾರದು. ಯಾವುದೇ ಕಾರಣಕ್ಕೂ ತಿಂಗಳುಗಟ್ಟಲೆ ಮೂರ್ತಿಯ ಪ್ರತಿಷ್ಠಾಪನೆ ಅಥವಾ ವಿಸರ್ಜನೆ ಇಟ್ಟುಕೊಳ್ಳಬಾರದು. ಮಂಟಪದಲ್ಲಿ ಅಲಂಕಾರಕ್ಕಾಗಿಯೂ ಬಲೂನು ಅಥವಾ ಥರ್ಮಾಕೋಲ್ ಉಪಯೋಗಿಸಬಾರದು. ತೆಳ್ಳಗಿರಲಿ ಅಥವಾ ಸರಕಾರ ಅಂಗೀಕರಿಸಿದಷ್ಟು ಮೈಕ್ರಾನ್ ದಪ್ಪದ್ದೇ ಆಗಿರಲಿ, ಯಾವುದೇ ಪ್ಲಾಸ್ಟಿಕ್ ಚೀಲಗಳು, ಲೋಟಗಳು, ಫ್ಲಾಕ್ಸ್ ಬ್ಯಾನರ್, ಡೈನಿಂಗ್ ಟೇಬಲ್ ಕ್ಲಾಥ ಇತ್ಯಾದಿಗಳನ್ನು ಬಳಸಬಾರದು.
ರಾತ್ರಿ 10 ರಿಂದ ಬೆಳಿಗ್ಗೆ 6 ಘಂಟೆಯವರೆಗೆ ಧ್ವನಿವರ್ಧಕ ಬಳಸಬಾರದು. (ಉಳಿದವರು ಬೆಳಿಗ್ಗೆ 5 ಘಂಟೆಗೇ ಬಳಸಿದರೂ ನಾವು ತಕರಾರು ಮಾಡಬಾರದು?.) ಹಸಿರು ಪಟಾಕಿಗಳನ್ನು ಮಾತ್ರ ಸುಡಬೇಕು. ಈ ಪಟಾಕಿಗಳ ಮೇಲೆ CSIR ಮತ್ತು NEERI ಚಿನ್ನೆ ಮತ್ತು ಕೋಡ್ ಕಡ್ಡಾಯವಾಗಿ ಮುದ್ರಿಸಿರಬೇಕು. (ಪ್ರತಿಯೊಂದು ಪಟಾಕಿಯ ಮೇಲೂ ಈ ಕೋಡಗಳನ್ನು ನೋಡುವವರು ಹಾಗೂ ಅವುಗಳ ಸತ್ಯಾ ಸತ್ಯತೆಯನ್ನು ಪರೀಕ್ಷೆ ಮಾಡುವವರು ಯಾರು?.)
ಮೂರ್ತಿ ತಯಾರಿಕರು ಕೇವಲ ನೈಸರ್ಗಿಕ ಬಣ್ಣವನ್ನು ಮಾತ್ರ ಉಪಯೋಗಿಸಬೇಕು. ( ನೈಸರ್ಗಿಕ ಬಣ್ಣ ಅಂದರೆ, ಅದು ಯಾವುದು?. ಕೇವಲ ಮಣ್ಣು ಮಿಶ್ರಿತ ನೀರೇ?.) ಇಂತಹ ಹತ್ತು ಹಲವು ಗೊಂದಲ, ಆಧ್ವಾನಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಹೊಸ ಆದೇಶದಲ್ಲಿದೆ.
ಇವರ ಕಟ್ಟುಪಾಡು ಹೀಗೇ ಮುಂದುವರೆದರೆ, ಮುಂದೊಂದು ದಿನ ನಮ್ಮ ನಮ್ಮ ಸ್ವಂತ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಟಾಪಿಸಲೂ ಸರಕಾರಕ್ಕೆ ಇಂತಿಷ್ಟು ಫೀಸು ಕಟ್ಟಿ ಪರವಾನಗಿ ಪಡೆಯುವ ದಿನಗಳೂ ಬರಬಹುದು ಎಂದು ರಾಮು ನಾಯ್ಕ ಆತಂಕ ವ್ಯಕ್ತಪಡಿಸಿದ್ದಾರೆ.