ಶಿರಸಿ: ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಗೋಕರ್ಣದಲ್ಲಿ ಹೋಮ ಮಾಡಿದ್ದ ಬಿಜೆಪಿ ಧುರಿಣ ಅನಂತಮೂರ್ತಿ ಹೆಗಡೆ ಇದೀಗ ತಮ್ಮ ರಾಜಕೀಯ ವಿರೋಧಿ ಮಂಕಾಳು ವೈದ್ಯರ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ.
`ನಾನು ಮಂಕಾಳು ವೈದ್ಯರನ್ನು ಬಹಳ ಗೌರವಿಸುತ್ತೇನೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ, ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿದ್ದೇನೆ’ ಎಂದು ಅನಂತಮೂರ್ತಿ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು. `ಮಂಕಾಳು ವೈದ್ಯರಿಗೆ ಹುಷಾರಿಲ್ಲ ಎಂದರೆ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಅವರಿಗೆ ಮತ ಹಾಕಿದ ಬಡವರು, ಕೂಲಿ ಕಾರ್ಮಿಕರ ಜೀವ ಹೋಗುತ್ತಿದ್ದರೂ ತುರ್ತು ಚಿಕಿತ್ಸೆಗೆ ಇಲ್ಲಿ ಸೂಕ್ತ ಆಸ್ಪತ್ರೆ ಇಲ್ಲ. ತಾನು ಗೆದ್ದರೆ ಸ್ವಂತ ವೆಚ್ಚದಲ್ಲಾದರೂ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿದ ಮಂಕಾಳು ವೈದ್ಯರು ಇದೀಗ ಸರಕಾರದ ನೆರವು ಪಡೆದು ಆಸ್ಪತ್ರೆ ನಿರ್ಮಿಸುವಲ್ಲಿಯೂ ವಿಫಲರಾಗಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಾದರೂ ಆಸ್ಪತ್ರೆ ಆಗಲಿ ಎಂಬ ಕಾರಣಕ್ಕೆ ಅವರ ಪರವಾಗಿ ದೇವರಲ್ಲಿ ಬೇಡಿಕೊಂಡಿದ್ದೇನೆ’ ಎಂದು ಹೇಳಿದರು.
`ಚುನಾವಣೆ ವೇಳೆ ಕುಮಟಾಗೆ ಬಂದಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವರಕುಮಾರ್ ಆಸ್ಪತ್ರೆಯ ಘೋಷಣೆ ಮಾಡಿದ್ದರು. ಆದರೆ, ಇದೀಗ ಆಸ್ಪತ್ರೆ ಸುದ್ದಿ ಹೇಳಿದರೆ ಎಲ್ಲರೂ ದೂರವಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳು ವೈದ್ಯರಿಗೆ ಸಹ ಮನುಷ್ಯತ್ವವಿಲ್ಲ’ ಎಂದು ಅವರು ಕಿಡಿಕಾರಿದರು. ಇನ್ನೂ 45 ದಿನದ ಒಳಗಾಗಿ ಆಸ್ಪತ್ರೆ ಮಾಡದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
Discussion about this post