ಧಾರಾಕಾರ ಮಳೆಯಿಂದಾಗಿ ಎಲ್ಲಡೆ ವಿದ್ಯುತ್ ಸಮಸ್ಯೆ ಜೋರಾಗಿದ್ದು, ಹೆಸ್ಕಾಂ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ.
ವಿದ್ಯುತ್ ಕಂಬ ಮುರಿತ, ತಂತಿಗಳ ಮೇಲೆ ಮರ ಬೀಳುವುದು ಸೇರಿದಂತೆ ಮಳೆಗಾಲದ ಸಮಸ್ಯೆಗಳು ದಿನದಿಂದ ದಿನಕ್ಕೆ ಅಧಿಕವಾಗಿದೆ. ಈ ಬಗ್ಗೆ ಪ್ರತಿ ದಿನ ನೂರಕ್ಕೂ ಅಧಿಕ ಸಮಸ್ಯೆಯ ಬಗ್ಗೆ ಸಹಾಯವಾಣಿಗೆ ದೂರು ಬರುತ್ತಿದೆ. ಎಲ್ಲಾ ತಾಲೂಕುಗಳಲ್ಲಿಯೂ ವಿದ್ಯುತ್ ಸಮಸ್ಯೆ ಬಗೆಹರಿಸಲು ಹೆಸ್ಕಾಂ ತಂಡ ರಚಿಸಿದ್ದು, ಅಧಿಕಾರಿ ಹಾಗೂ ಸಿಬ್ಬಂದಿ ತಡರಾತ್ರಿ ಕಳೆದರೂ ಮನೆ ಸೇರುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಯಿಂದ ಹಿಡಿದು ದೊಡ್ಡ ದೊಡ್ಡ ಸವಾಲುಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸದಲ್ಲಿ ಲೈನ್‌ಮೇನ್’ಗಳು ನಿರತರಾಗಿದ್ದಾರೆ. ಗಾಳಿ – ಮಳೆಯನ್ನು ಲೆಕ್ಕಿಸದೇ ಸಿಬ್ಬಂದಿ ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಬುಧವಾರ ರಾತ್ರಿ ಗೋಕರ್ಣದ ಸ್ಮಶಾನಕಾಳಿ ಮಂದಿರದ ಬಳಿ ವಿದ್ಯುತ್ ಪರಿವರ್ತಕದ ಮೇಲೆ ತೆಂಗಿನಮರ ಬಿದ್ದಿದ್ದು, 300ಕ್ಕೂ ಅಧಿಕ ಮನೆಗಳಲ್ಲಿ ಬೆಳಕಿರಲಿಲ್ಲ. ವಿದ್ಯುತ್ ಕಂಬ ಸಹ ಮುರಿದಿತ್ತು. ತಕ್ಷಣ ಧಾವಿಸಿದ ಹೆಸ್ಕಾಂ ಸಿಬ್ಬಂದಿ ಕತ್ತಲೆ ಹಾಗೂ ಮಳೆಯನ್ನು ಗಣನೆಗೆ ತೆಗೆದುಕೊಳ್ಳದೇ ರಾತ್ರಿಯೇ ಬೆಳಕು ನೀಡಿದರು.
Discussion about this post