ಕಾರವಾರ: ಸಹಕಾರಿ ಸೊಸೈಟಿನಲ್ಲಿ ಇರಿಸಿದ ಠೇವಣಿ ಅವಧಿ ಮುಗಿದರೂ ಹಣ ಮರಳಿಸದ ಕಾರವಾರದ ಆಶ್ರಯ ಪತ್ತಿನ ಸಹಕಾರಿ ಸಂಘಕ್ಕೆ ಗ್ರಾಹಕ ವ್ಯಾಜ್ಯಗಳ ಆಯೋಗ ದಂಡ ವಿಧಿಸಿ, ಗ್ರಾಹಕರಿಗೆ ನ್ಯಾಯ ನೀಡಿದೆ.
ರಾಜ್ಯ ಸರ್ಕಾರದ ನಿವೃತ್ತ ನೌಕರ ಕೃಷ್ಣ ಪಾಂಡುರAಗ ಗಾಂವ್ಕರ್ ಅವರು ಕಾರವಾರದ ಆಶ್ರಯ ಪತ್ತಿನ ಸಹಕಾರಿ ಸಂಘದಲ್ಲಿ 7,22,853ರೂ ಹಣ ಠೇವಣಿ ಮಾಡಿದ್ದರು. ಜೊತೆಗೆ ಉಳಿತಾಯ ಖಾತೆಯಲ್ಲಿ 1,40,226ರೂ ಹಣ ಹೊಂದಿದ್ದರು. ಠೇವಣಿ ಅವಧಿ ಮುಗಿದರೂ ಸೊಸೈಟಿಯವರು ಹಣ ಮರಳಿಸಲು ಸಿದ್ಧವಿರಲಿಲ್ಲ. ಈ ಬಗ್ಗೆ ಅವರು ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದು, ವಿಚಾರಣೆ ನಡೆಸಿದ ಆಯೋಗ ಸೊಸೈಟಿಗೆ 60 ಸಾವಿರ ರೂ ದಂಡ ವಿಧಿಸಿದೆ. ಅದರಲ್ಲಿ 50 ಸಾವಿರ ರೂ ಗ್ರಾಹಕನಿಗೆ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.
ಜೊತೆಗೆ ಠೇವಣಿಗೆ ಶೇ 12ರ ಬಡ್ಡಿ ಹಾಗೂ ಉಳಿತಾಯ ಖಾತೆಯ ಹಣಕ್ಕೆ ಶೇ 6ರ ಬಡ್ಡಿ ನೀಡಬೇಕು. ಪ್ರಕರಣದ ಎಲ್ಲಾ ಖರ್ಚುಗಳನ್ನು ಸೊಸೈಟಿ ಭರಿಸಬೇಕು ಎಂದು ಸೂಚಿಸಿದೆ. ದೂರುದಾರರ ಪರ ಹಿರಿಯ ನ್ಯಾಯವಾದಿ ಎಸ್.ವಾಯ್.ಶೇಜವಾಡಕರ, ಸೊಸೈಟಿ ಪರ ನ್ಯಾಯವಾದಿ ಜಿ.ಪಿ.ತಳೇಕರ ವಾದ ಮಂಡಿಸಿದ್ದರು.
Discussion about this post