ಕಾರವಾರ: `ಜಿಲ್ಲೆಯಲ್ಲಿ ಅಪರಿಚಿತ ವಾಹನಗಳು ಡಿಕ್ಕಿಯಾಗಿ ಸಾವನಪ್ಪಿದ 4 ಮಂದಿಯ ವಾರಸುದಾರರಿಗೆ `ಹಿಟ್ ಅಂಡ್ ರನ್’ ವಾಹನ ಅಪಘಾತ ಕಾಯ್ದೆಯಂತೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು’ ವಿಮಾ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿ, `ಜಿಲ್ಲೆಯಲ್ಲಿ ಅಪರಿಚಿತ ವಾಹನಗಳು ಡಿಕ್ಕಿಯಾಗಿ ಮರಣ ಹೊಂದಿದ ಭಟ್ಕಳ ತಾಲೂಕಿನ 1, ಹೊನ್ನಾವರ ತಾಲೂಕಿನ 2 ಮತ್ತು ಹಳಿಯಾಳ ತಾಲೂಕಿನ 1 ಪ್ರಕರಣಗಳಲ್ಲಿನ ಮೃತರ ವಾರಿಸುದಾರರಿಗೆ ತಲಾ 2 ಲಕ್ಷ ರೂಗಳಂತೆ 8 ಲಕ್ಷ ರೂ ಪರಿಹಾರ ನೀಡಬೇಕು. ಈ ರೀತಿ ಬೇರೆ ಎಲ್ಲಾದರೂ ಪ್ರಕರಣ ನಡೆದಿದ್ದರೆ ಪೊಲೀಸರು ತಕ್ಷಣ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು. `ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ಕಾಯಿದೆಯಡಿ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ ಹಾಗೂ ಸಾವನಪ್ಪಿದವರ ಕುಟುಂಬಕ್ಕೆ 2 ಲಕ್ಷ ರೂ ಪಾವತಿಸಲು ಸುತ್ತೋಲೆ ಹೊರಡಿಸಿದೆ. ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಅಗತ್ಯ’ ಎಂದರು.
ಜಿಲ್ಲೆಯಲ್ಲಿ ಸಂಭವಿಸುವ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯಲ್ಲಿ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಪರಿಹಾರ ವಿಚಾರಣಾ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಜಿಲ್ಲಾಧಿಕಾರಿಗಳಿಂದ ನಾಮನಿರ್ದೇಶನಗೊಂಡ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಮತ್ತು ವಿಮಾ ಕಂಪೆನಿಯ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
Discussion about this post