ಸವಣೂರು: ವಿಧಾನ ಪರಿಷತ್ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಲೀಂ ಅಹ್ಮದ್ ಅವರು ಹಾವೇರಿ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದರು. ಸವಣೂರು ಪಟ್ಟಣಕ್ಕೆ ಆಗಮಿಸಿದ ಅವರು ಸವಣೂರು ಹಾಗೂ ಮರಘಾ ಮಠ ಸೇರಿದಂತೆ ವಿವಿಧ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಲೀಂ ಅಹ್ಮದ್, ಸಭಾಪತಿ ಸ್ಥಾನದಲ್ಲಿ ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸುವುದು ತಮ್ಮ ಕರ್ತವ್ಯ ಎಂದು ಹೇಳಿದರು. ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ಜನಪ್ರತಿನಿಧಿಯಾಗಿ ಕೆಲಸ ಮಾಡಿರುವುದಾಗಿ ತಿಳಿಸಿದರು.
45 ವರ್ಷಗಳ ಕಾಲ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು, ಮೂವರು ಪ್ರಧಾನಮಂತ್ರಿಗಳ ಅವಧಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಸಭಾಪತಿ ಸ್ಥಾನದ ಹಿರಿಮೆಯನ್ನು ಕಾಪಾಡುವ ಉದ್ದೇಶದಿಂದ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದರು. ಆಡಳಿತ ಮತ್ತು ವಿರೋಧ ಪಕ್ಷಗಳನ್ನು ಸಮಾನವಾಗಿ ಪರಿಗಣಿಸಿ ಸದನವನ್ನು ನಡೆಸುವುದಾಗಿ ಸ್ಪಷ್ಟಪಡಿಸಿದರು.
ಇದೇ ತಿಂಗಳ 21, 22 ಹಾಗೂ 23ರಂದು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸಲಿದ್ದು, ರಾಜ್ಯದ ಬರ ಪರಿಸ್ಥಿತಿ, ರೈತರ ಜ್ವಲಂತ ಸಮಸ್ಯೆಗಳು ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಸುದೀರ್ಘ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.
ಅಧಿವೇಶನ ಸುಸೂತ್ರವಾಗಿ ಹಾಗೂ ಯಾವುದೇ ಗದ್ದಲವಿಲ್ಲದೆ ನಡೆಯಲು 21ರಂದು ಎಲ್ಲ ಪಕ್ಷಗಳ ಫ್ಲೋರ್ ಲೀಡರ್‌ಗಳ ಸಭೆ ಕರೆಯಲಾಗಿದೆ. ಕಾವೇರಿ ನೀರು ಹಂಚಿಕೆ ಹಾಗೂ ಕೃಷಿ ಬಳಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಸರ್ಕಾರದಿಂದ ಸೂಕ್ತ ಉತ್ತರ ಕೊಡಿಸುವ ಜವಾಬ್ದಾರಿ ತಮ್ಮದಾಗಿದೆ ಎಂದು ಸಲೀಂ ಅಹ್ಮದ್ ಹೇಳಿದರು.




