ರಾಣೆಬೆನ್ನೂರು: ಮೋಡ ಬಿತ್ತನೆ ವಿಚಾರವಾಗಿ ಬಿಜೆಪಿ ನಾಯಕರಿಗೆ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಟಾಂಗ್ ನೀಡಿದ್ದಾರೆ. ರೈತರ ವಿಚಾರದಲ್ಲಿ ರಾಜಕೀಯ ಮಾಡದೆ, ಮೋಡ ಬಿತ್ತನೆಗೆ ಸಂಬಂಧಿಸಿದ ಮಾನದಂಡಗಳನ್ನು ಸಡಿಲಗೊಳಿಸುವಂತೆ ತಮ್ಮ ಸರ್ಕಾರದ ಬಳಿ ಮನವಿ ಮಾಡುವಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.
ರಾಣೆಬೆನ್ನೂರಿನಲ್ಲಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ, “ರೈತರ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಿಮ್ಮ ಸರ್ಕಾರದಿಂದ ಮಾನದಂಡ ಸಡಿಲಿಕೆಗೆ ಮನವಿ ಮಾಡಿ. ನಮ್ಮ ಕಾಂಗ್ರೆಸ್ ಎಂಪಿಗಳನ್ನು ನಿಮ್ಮ ಬಳಿ ಕಳಿಸುತ್ತೇವೆ” ಎಂದು ಹೇಳಿದ್ದಾರೆ.
ಮೋಡ ಬಿತ್ತನೆಯಿಂದ ಮಳೆಯಾಗುವುದಿಲ್ಲ ಎಂದು ಕೆಲವರು ಹೇಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜ್ಞಾನದ ಅರಿವಿಲ್ಲದೆ ಕೆಲವರು ಮಾತನಾಡುತ್ತಾರೆ ಎಂದು ಟೀಕಿಸಿದರು.
ಮೋಡ ಬಿತ್ತನೆ ಕುರಿತು ಕೇಂದ್ರ ಸರ್ಕಾರದ ಸಂಶೋಧನೆ ಹಾಗೂ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಕೋಳಿವಾಡ, 2020ರಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಮೋಡ ಬಿತ್ತನೆ ಮಾಡಬೇಕು ಎಂಬುದರ ಕುರಿತು ಸೂಚನೆ ನೀಡಿದೆ. ಕೇಂದ್ರ ಸರ್ಕಾರದ SOP ಪ್ರಕಾರವೇ ನಾವು ಮೋಡ ಬಿತ್ತನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮೋಡ ಬಿತ್ತನೆಯಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕುರಿತು ಅಧ್ಯಯನಗಳಲ್ಲಿ ಉಲ್ಲೇಖವಿದೆ ಎಂದು ಹೇಳಿದ ಅವರು, “ಶೇ.46ರಷ್ಟು ಮೋಡ ಬಿತ್ತನೆಯಿಂದ ಮಳೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
ಇದೇ ವೇಳೆ ಮಹಾರಾಷ್ಟ್ರದ ಉದಾಹರಣೆಯನ್ನು ನೀಡಿದ ಶಾಸಕ ಕೋಳಿವಾಡ, ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಕಂಪನಿಯ ಕಾರ್ಯವನ್ನು ಹೊಗಳಿದ್ದರು ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಮೋಡ ಬಿತ್ತನೆ ಮಾಡಿದ ಬಳಿಕ ಮಳೆಯಾಗಿದ್ದು, ಅಲ್ಲಿನ ರೈತರು ಪೈಲಟ್ ಚಾಲಕನನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದರು ಎಂದು ಅವರು ವಿವರಿಸಿದರು.
“ಜ್ಞಾನ ಇಲ್ಲದೆ ಮಾತನಾಡಿದರೆ ಅದರ ಬಗ್ಗೆ ನಾನು ಮಾತನಾಡಲ್ಲ” ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರಕಾಶ ಕೋಳಿವಾಡ ತಿರುಗೇಟು ನೀಡಿದರು.




