ಕಾರವಾರ ತಾಲೂಕಿನ ಮಲ್ಲಾಪುರದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಜನ ದೂರಿದರು. ಎಲ್ಲರ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಶಾಸಕ ಸತೀಶ್ ಸೈಲ್ ಭರವಸೆ ನೀಡಿದರು.
`ಕಳೆದ ಮಳೆಗಾಲದಲ್ಲಿ ಈ ಭಾಗದ ಜನರಿಗೆ, ಕದ್ರಾ ಅಣೆಕಟ್ಟಿ’ನಿಂದ ಹೊರಬಿಡುವ ನೀರಿನಿಂದ ಪ್ರವಾಹ ಉಂಟಾಗಿ ಸಮಸ್ಯೆಯಗಿತ್ತು. ಈ ಬಾರಿ ಮುನ್ನಚ್ಚರಿಕೆವಹಿಸಿ ಹಂತ ಹಂತವಾಗಿ ನೀರು ಹೊರಬಿಡಬೇಕು’ ಎಂದು ಸತೀಶ್ ಸೈಲ್ ಕೆಪಿಸಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. `ಮಳೆಗಾಲದಲ್ಲಿ ಈ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಾಗುವುದರಿಂದ ಮುಂಜಾಗ್ರತವಾಗಿ ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಅಗತ್ಯ ಸಾಮಗ್ರಿ ಇರಿಸಿಕೊಳ್ಳಬೇಕು’ ಎಂದರು. ರಕ್ಷಣಾ ಕಾರ್ಯಚರಣೆಗೆ ಅಗತ್ಯವಾದ ಬೋಟ್‌ಗಳ ಮಾಹಿತಿ ಪಡೆದ ಅವರು `ಇಲ್ಲಿರುವ ಬೋಟ್‌ಗಳು ಕೇವಲ ಕೈಗಾ ಅಣು ವಿದ್ಯುತ್ ಸ್ಥಾವರದ ಸಿಬ್ಬಂದಿ ಉಪಯೋಗಕ್ಕೆ ಮಾತ್ರ ಬಳಸದೇ ಸಾರ್ವಜನಿಕರ ಉಪಯೋಗಕ್ಕೆ ಬಳಸಬೇಕು’ ಎಂದು ಸೂಚನೆ ನೀಡಿದರು. `ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತಿ ವರ್ಷ ಪೊಲೀಸ್ ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವಂತೆ ತಿಳಿಸುತ್ತಿದ್ದಾರೆ. ಅನಗತ್ಯ ತೊಂದರೆ ಕೊಡಬೇಡಿ’ ಎಂದು ಸೂಚಿಸಿದರು.
`ಕೈಗಾ ರಸ್ತೆ ಮಾರ್ಗದಲ್ಲಿ ಹೆಚ್ಚಿನ ತಿರುವು ಇರುವುದರಿಂದ ಕೈಗಾ ರಸ್ತೆ ಕಾಮಗಾರಿಗೆ 25 ಕೋಟಿ ರೂ ಅನುದಾನ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಗಿದ್ದು, ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕು’ ಎಂದು ಸೂಚಿಸಿದರು. `ಈ ಹಿಂದೆ ಮಲ್ಲಾಪುರ- ಹುಬ್ಬಳ್ಳಿ ಬಸ್ ಸಂಚಾರ ನಡೆಯುತ್ತಿತ್ತು. ಈಗ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ’ ಎಂದು ಜನ ದೂರಿದರು. ಮಲ್ಲಾಪುರ- ಹುಬ್ಬಳ್ಳಿ ಬಸ್ ಸಂಚಾರವನ್ನು ಪುನಃ ಪ್ರಾರಂಭಿಸುವAತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೈಲ್ ಸೂಚಸಿದರು. 70ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿದ್ದು, ಅದನ್ನು ಬಗೆಹರಿಸುವುದಾಗಿ ಹೇಳಿದರು.
Discussion about this post