ಹಾವೇರಿ: ಗಣೇಶ ಹಬ್ಬದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ ಮದ್ಯಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಆದೇಶವನ್ನು ಪರಿಷ್ಕರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.
ಪರಿಷ್ಕೃತ ಆದೇಶದಂತೆ ಸೆಪ್ಟೆಂಬರ್ 24ರಂದು ಬೆಳಿಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 25ರ ಬೆಳಿಗ್ಗೆ 6 ಗಂಟೆಯವರೆಗೆ ಬಂಕಾಪುರ ಹಾಗೂ ಭದ್ರಾಪುರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇದೇ ವೇಳೆ, ಸೆಪ್ಟೆಂಬರ್ 18ರಂದು ಬೆಳಿಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 19ರ ಬೆಳಿಗ್ಗೆ 6 ಗಂಟೆಯವರೆಗೆ ಬಂಕಾಪುರ, ಮುನವಳ್ಳಿ, ಭದ್ರಾಪುರ, ಕೋಡ ಹಾಗೂ ಕುಮ್ಮೂರದಲ್ಲಿ ವಿಧಿಸಲಾಗಿದ್ದ ಮದ್ಯಮಾರಾಟ ನಿಷೇಧವನ್ನು ರದ್ದುಪಡಿಸಲಾಗಿದೆ.
ಅದೇ ರೀತಿ, ಸೆಪ್ಟೆಂಬರ್ 20ರಂದು ಬೆಳಿಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಮುನವಳ್ಳಿ ಹಾಗೂ ಭದ್ರಾಪುರದಲ್ಲಿ ವಿಧಿಸಲಾಗಿದ್ದ ಮದ್ಯಮಾರಾಟ ನಿಷೇಧವನ್ನೂ ರದ್ದುಪಡಿಸಲಾಗಿದೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮಗಳನ್ನು ಕೈಗೊಂಡಿದೆ.




