ನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ
ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ ಬೆಂಗಳೂರು: ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು ಮತ್ತು ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಲು ಹಾವೇರಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದ್ಯಸ್ಯರು ಮತ್ತು ಇತರ ಪ್ರಮುಖರು ಹೋರಾಟಗಾರರ ಒಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲ ಸಪನ್ಮೂಲ ಸಚಿವ ಎನ್. ಚಲುವರಾಯ ಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಈಗ ತೀವ್ರವಾದಂತಹ ಬರಗಾಲದ ಬರೆ ಅನುಭವಿಸುತ್ತಿದ್ದೇವೆ. ಇದರಿಂದ ರಾಜ್ಯದ ಜನ ಸಾಮಾನ್ಯರ ಬದುಕು ಅತ್ಯಂತ ಕಷ್ಟಕರವಾಗಿದೆ ಬರುವ ದಿನಗಳಲ್ಲಿ ಕುಡಿಯುವ ನೀರು ದನಕರುಗಳಿಗೆ ನೀರು ಮತ್ತು ಮೇವು ಕೂಡ ಸಿಗದಂತಹ ಭೀಕರವಾದ ಪರಿಸ್ಥಿತಿ ಎದುರಿಸಬೇಕಾಗಿದೆ. ಮಳೆಯನ್ನೇ ನಂಬಿಕೊಂಡಿರುವ ರೈತರು ಅಪಾರ ಕಷ್ಟ ನಷ್ಟ ನಿರಂತರ ಅನುಭವಿಸುದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರ ಅತ್ಯಂತ ಸಾಮಾನ್ಯ ವಿಷಯವಾಗಿದೆ ಕಳೆದ ಮೂವತ್ತು ವರ್ಷದಲ್ಲಿ ಹದಿನೇಳು ವರ್ಷ ಬರವನ್ನು ಉತ್ತರ ಕರ್ನಾಟಕದ ಜನ ಅನುಭವಿಸುತ್ತಿದ್ದಾರೆ.ಬರ ನಿರ್ವಹಣೆ ಅಲ್ಪಾವಧಿಯ ಕೆಲವು ಕ್ರಮಗಳನ್ನು ರಾಜ್ಯ ತೆಗೆದುಕೊಳ್ಳಬೇಕು ಮತ್ತು ಕೇಂದ್ರ ನೆರವಿಗೆ ಬರಬೇಕು ವಿಶೇಷವಾಗಿ ಕುಡಿಯವ ನೀರು ಮೇವು, ಜನರ ಕೈಗೆ ಕೆಲಸ ಕೊಡುವ ಕೆಲಸವನ್ನು ತಾವು ಮಾಡಬೇಕೆಂದು ಆಗ್ರಹಪಡಿಸುತ್ತಾ ಕೆಲವು ಶಾಸ್ವತವಾದ ಕ್ರಮಗಳನ್ನು ತೆಗೆದುಕೊಳ್ಳಲು ಅತ್ಯಂತ ಸೂಕ್ತಕಾಲವಾಗಿದೆ. ಅದರಲ್ಲಿ ನದಿ ಜೋಡಣೆಯ ಯೋಜನೆ ಅಡಿಯಲ್ಲಿ ಬೆಡ್ತಿ ವರದಾ ಜೋಡಣೆ ಅತ್ಯಂತ ಪ್ರಮುಖ ವಾಗಿದೆ ಎಂದು ತಿಳಿಸಿದ್ದಾರೆ. ನದಿ ಜೋಡಣೆ ಬೇಡ್ತಿ ವರದಾ ಜೋಡಣೆ ಕೇಂದ್ರದ ನದಿ ಜೋಡಣೆಯ ಯೋಜನೆಯಲ್ಲಿ ಕರ್ನಾಟಕದಲ್ಲಿ ಪ್ರಮುಖವಾಗಿದ್ದು ಈಗಾಗಲೇ ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ನದಿ ಯೋಜನೆ ಅಡಿಯಲ್ಲಿ ಇದಕ್ಕೆ 18 ಟಿಎಂಸಿ ನೀರು ಮೀಸಲಿಟ್ಟಿದ್ದು, ಇದನ್ನು ನಮ್ಮ ಸರ್ಕಾರ ಇಟ್ಟಿದ್ದು ತಾವೂ ಕೂಡ ಮೇಲ್ಕಂಡ ವಿಚಾರದಲ್ಲಿ ಕೇಂದ್ರ ಮತ್ತು ಇತರ ರಾಜ್ಯಗಳ ಜೊತೆಗೆ ಎಂಒಯುಗೆ ಒಪ್ಪಿಗೆ ಸೂಚಿಸಿರುವುದು ಉತ್ತಮ ನಿರ್ಧಾರ ಎಂದು ಹೇಳ ಬಯಸುತ್ತೇನೆ. ಈಗ ಎರಡನೇ ಬಾರಿ ಡಿಪಿಆರ್ ಮಾಡುವಂತ ಹಂತಕ್ಕೆ ಬಂದು ಹಲವು ತಿಂಗಳುಗಳು ಕಳೆದರೂ ಕೂಡ ಡಿಪಿಆರ್ ಪ್ರಗತಿ ಅತ್ಯಂತ ಆಮೆಗತಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಇದರ ಬಗ್ಗೆ ಜಲಸಂಪನ್ಮೂಲ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಬಹಳ ಸ್ಪಷ್ಟ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಡು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಕಳಿಸಿದ್ದೆ ಅದರೆ ಕೇಂದ್ರ ಸರ್ಕಾರದಿಂದ ಯೋಜನೆಯ ಶೇ 90 ರಷ್ಟು ಅನುದಾನ ನದಿ ಜೋಡಣೆಯ ಯೋಜನೆಯಲ್ಲಿ ನಮಗೆ ಸಿಗುತ್ತದೆ ಇದನ್ನು ಸದ್ಬಳಕೆ ಮಾಡಬೇಕಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಯಾವುದೇ ದೊಡ್ಡ ಪ್ರಮಾಣದ ನೀರನ್ನು ಹಿಡಿದಿಡುವ ಜಲಾಶಯ ನಿರ್ಮಾಣ ಇಲ್ಲದೇ ನೀರನ್ನು ಎತ್ತುವ ಮುಖಾಂತರ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದೇ ಮತ್ತು ಮಳೆಗಾಲದಲ್ಲಿ ನೀರನ್ನು ಎತ್ತುವ ಮುಖಾಂತರ ಹೆಚ್ಚುವರಿ ನೀರು ಉತ್ತರ ಕನ್ನಡ ದಾಟಿ ಸಮುದ್ರ ಸೇರುತ್ತಿರುವುದು ಅದರಿಂದ ಯಾವುದೇ ರೀತಿಯ ನೀರಿನ ಕೊರತೆಯೂ ಕೂಡ ಬೆಡ್ತಿ ನದಿಯಲ್ಲಿ ಉತ್ತರ ಕನ್ನಡ ಜನತೆಗೆ ಆಗುವುದಿಲ್ಲ. ಇದರ ಬಗ್ಗೆ ಅಲ್ಲಿಯ ಪೂಜ್ಯರಿಗೆ ಪ್ರಮುಖರಿಗೆ ಮನವರಿಕೆ ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ. ನಮ್ಮದು ಎರಡು ಪ್ರಮುಖ ಬೇಡಿಕೆಗಳಿವೆ. 1) ಸುಮಾರು 18 ,ಟಿಎಂಸಿ ನೀರನ್ನು ಗದಗ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿಗೆ ಸದ್ಬಳಕೆ ಮಾಡುವ ಕೆಲಸ ಆಗಬೇಕು. 2) ನಮ್ಮ ಹಾವೇರಿ ಜಿಲ್ಲೆಗೆ ಅದಕ್ಕೆ ಬೇಕಾಗಿರುವ ನೀರನ್ನು ಸಂಗ್ರಹ ಮಾಡಲು ಪ್ರತ್ಯೇಕ ಸಂಗ್ರಹಗಾರ ರಿಸರ್ವಾಯರ್ ನ್ನು ಮಾಡುವ ಬಗ್ಗೆ ಡಿಪಿಆರ್ ನಲ್ಲಿ ಪ್ರಮುಖವಾಗಿ ಕಾಣಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ವರದಾ ಮತ್ತು ತುಂಗಭದ್ರಾ ನದಿ ಪಾತ್ರದ ನಾಲ್ಕು ಜಿಲ್ಲೆಯ ಜನರಿಗೆ ಬರಗಾಲದಿಂದ ಬಿಡುಗಡೆ ಮಾಡುವ ಬೆಡ್ತಿ ವರದಾ ಜೋಡಣೆ ಬದುಕಿನ ಆಶ್ರಯ ಆಗಿದೆ. ಇದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಕೂಡಲೇ ನಮ್ಮ ಜಿಲ್ಲೆಯ ಎಲ್ಲ ಸಚಿವರ ಮತ್ತು ಶಾಸಕರ, ವಿಧಾನ ಪರಿಷತ್ ಸದ್ಯಸ್ಯರು ಮತ್ತು ಇತರ ಪ್ರಮುಖರು ಹೋರಾಟಗಾರರ ಒಂದು ಸಭೆಯನ್ನು ತಾವು ಬೆಂಗಳೂರಿನಲ್ಲಿ ನಡೆಸಿ ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ತಾವು ಮಾಡಬೇಕಾಗಿ ವಿನಂತಿ. ಕೂಡಲೇ ದಿನಾಂಕವನ್ನು ಸೂಚಿಸಲು ಮನವಿ ಮಾಡಿದ್ದಾರೆ
