ಹಾವೇರಿಯಲ್ಲಿ ‘ವಿಕಸಿತ ಭಾರತ ಸಂಕಲ್ಪ ಸಭೆ ಹಾಗೂ ಸೇವಾ ಜ್ಯೋತಿ’ ಕಾರ್ಯಕ್ರಮ
ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯನ್ನು ಸ್ಮರಿಸಿ ಬಿಜೆಪಿ ವತಿಯಿಂದ ಕಾರ್ಯಕ್ರಮ
ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೀರ್ಘ 25 ವರ್ಷಗಳ ಜನಸೇವೆಯಿಂದ ದೇಶಸೇವೆಯ ಪಯಣವನ್ನು ಸ್ಮರಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಘಟಕದ ವತಿಯಿಂದ ‘ವಿಕಸಿತ ಭಾರತ ಸಂಕಲ್ಪ ಸಭೆ ಹಾಗೂ ಸೇವಾ ಜ್ಯೋತಿ’ ಕಾರ್ಯಕ್ರಮವನ್ನು ಹಾವೇರಿಯಲ್ಲಿ ಆಯೋಜಿಸಲಾಯಿತು.
ಹಾವೇರಿಯ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನ ಹಾಗೂ ದೇಶಸೇವೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಕಸಿತ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಮಾ. ನಾಗರಾಜ, ಭಾರತೀಯ ಜನತಾ ಪಾರ್ಟಿಯ ಹಾವೇರಿ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಡಾ. ಬಸವರಾಜ ಕೇಲಗಾರ, ಸಿದ್ದರಾಜ ಕಲಕೋಟಿ, ಡಾ. ಶೋಭಾ ನಿಸ್ಸಿಮಗೌಡ್ರ ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧ ಮಂಡಳಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಜನಸೇವೆಯ 25 ವರ್ಷಗಳನ್ನು ಸ್ಮರಿಸಿದರು.








