ರೈತರ ಹೆಮ್ಮೆಯ ಹೋರಿ ಹಬ್ಬ ಜೀವಂತವಾಗಿರಬೇಕು, ಅನುಮತಿ ಕೊಡಿಸಲು ನಿಮ್ಮ ಜೊತೆ ನಾನಿರುತ್ತೇನೆ: ಮಂಜಣ್ಣ ನೀಲಗುಂದ
ಹಿರೇಲಿಂಗದಹಳ್ಳಿಯಲ್ಲಿ ಹೋರಿ ಹಬ್ಬದ ಪರವಾಗಿ ಧ್ವನಿ ಎತ್ತಿದ ಕಬ್ಬೂರು ಜಿ.ಪಂ ಟಿಕೆಟ್ ಆಕಾಂಕ್ಷಿ ಮಂಜಣ್ಣ ನೀಲಗುಂದ
ಹಾವೇರಿ: ದುಡ್ಡು ಕೊಟ್ಟರೂ ಜನರನ್ನು ಸೇರಿಸುವುದು ಕಷ್ಟ. ಆದರೆ ಹೋರಿ ಹಬ್ಬಕ್ಕೆ 10ರಿಂದ 20 ಸಾವಿರ ಜನರು ಸ್ವಯಂಪ್ರೇರಿತರಾಗಿ ಸೇರುತ್ತಾರೆ. ಇದು ರೈತರ ಹೆಮ್ಮೆಯ ಹಬ್ಬವಾಗಿದ್ದು, ಇಂತಹ ಸಾಂಪ್ರದಾಯಿಕ ಆಚರಣೆಗಳು ಜೀವಂತವಾಗಿರಬೇಕು. ಹೋರಿ ಹಬ್ಬಕ್ಕೆ ಅನುಮತಿ ಕೊಡಿಸಲು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಂಜಣ್ಣ ನೀಲಗುಂದ ಭರವಸೆ ನೀಡಿದರು.
ಹಿರೇಲಿಂಗದಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ನಂತರ ಹೋರಿ ಬೆದರಿಸುವ ಹಬ್ಬಗಳು ಆರಂಭವಾಗುತ್ತವೆ. ಈ ಹಬ್ಬಗಳು ರೈತರ ಸಂಭ್ರಮ ಮತ್ತು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾನೂನು ಮತ್ತು ನಿಯಮಗಳ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗೆ ಹಲವು ಸವಾಲುಗಳು ಎದುರಾಗುತ್ತಿವೆ ಎಂದರು.
ಹೊಸ ಹೊಸ ಕಾನೂನುಗಳು ಬರುತ್ತಲೇ ಇರುತ್ತವೆ. ಅವುಗಳನ್ನು ಪಾಲಿಸುವುದರ ಜೊತೆಗೆ ಯಾರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿ ಕಾನೂನುಬದ್ಧವಾಗಿ ಹೋರಿ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.
ದುಡ್ಡು ಕೊಟ್ಟು ಜನರನ್ನು ಸೇರಿಸುವುದಕ್ಕಿಂತ ಹೋರಿ ಹಬ್ಬಕ್ಕೆ ಜನರು ತಾವಾಗಿಯೇ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಇಂತಹ ರೈತರ ಸಂಪ್ರದಾಯ ಮತ್ತು ಹೆಮ್ಮೆಯ ಹಬ್ಬವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೋರಿ ಹಬ್ಬಕ್ಕೆ ಅನುಮತಿ ಪಡೆಯುವ ವಿಚಾರದಲ್ಲಿ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಮಂಜಣ್ಣ ನೀಲಗುಂದ ತಿಳಿಸಿದರು.







