ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಗಳ ವಿವಾಹಕ್ಕೆ ಆಹ್ವಾನಿಸಿದ ಸಂಸದ ಬಸವರಾಜ ಬೊಮ್ಮಾಯಿ
ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ತಮ್ಮ ಮಗಳು ಅದಿತಿಯ ವಿವಾಹದ ಶುಭ ಆಮಂತ್ರಣ ಪತ್ರಿಕೆಯನ್ನು ನೀಡಿ ಮದುವೆಗೆ ಆತ್ಮೀಯವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದ ಬಸವರಾಜ ಬೊಮ್ಮಾಯಿ ಅವರ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತನಾಡಿ, ಕುಟುಂಬದ ಯೋಗಕ್ಷೇಮ ವಿಚಾರಿಸಿದರು. ವಿಶೇಷವಾಗಿ ಕುಟುಂಬದ ಮೊಮ್ಮಗನೊಂದಿಗೆ ಕೆಲಕಾಲ ಸಮಯ ಕಳೆದು ಆತ್ಮೀಯತೆ ಮೆರೆದರು.
ಇದೇ ವೇಳೆ ಬಸವರಾಜ ಬೊಮ್ಮಾಯಿ ಅವರ ಮಗಳು ಅದಿತಿಯ ವಿವಾಹದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಶೀರ್ವದಿಸಿ, ಶುಭ ಹಾರೈಸಿದರು.
ದೇಶದ ಕೋಟ್ಯಂತರ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿರುವ ಪ್ರಧಾನಮಂತ್ರಿಗಳು, ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಬೊಮ್ಮಾಯಿ ಕುಟುಂಬಕ್ಕೆ ಸಮಯ ನೀಡಿ ತೋರಿದ ಪ್ರೀತಿ, ಆತ್ಮೀಯತೆ ಹಾಗೂ ಕಾಳಜಿಗೆ ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಗಳೊಂದಿಗಿನ ಈ ಸುಂದರ ಕ್ಷಣಗಳು ತಮ್ಮ ಕುಟುಂಬದ ಪಾಲಿಗೆ ಸದಾ ಸ್ಮರಣೀಯವಾಗಿರಲಿವೆ ಎಂದು ತಿಳಿಸಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು, ಮೋದಿ ಜೀ ಅವರ ಪ್ರೀತಿ ಮತ್ತು ಆಶೀರ್ವಾದಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.





