6

ಹಾವೇರಿಯಲ್ಲಿ ಯುವ ಸಂಸತ್ತು ಅಧಿವೇಶನ; 112 ವಿದ್ಯಾರ್ಥಿಗಳ ಕಲಾಪ

ಯುವಕರೇ ದೇಶದ ಭವಿಷ್ಯದ ಶಿಲ್ಪಿಗಳು: ಸಚಿವ ರುದ್ರಪ್ಪ ಲಮಾಣಿ

ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ; 112 ವಿದ್ಯಾರ್ಥಿಗಳಿಂದ ವಿಧಾನಸಭೆ ಕಲಾಪಗಳ ಮಾದರಿ ಪ್ರದರ್ಶನ, ಪ್ರಶ್ನೋತ್ತರ, ಚರ್ಚೆ ಹಾಗೂ ವಿಧೇಯಕಗಳ ಮಂಡನೆ

ಹಾವೇರಿ, ನ.14 : ಯುವಕರು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದು ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ಸಂಸದೀಯ ಕಾರ್ಯವಿಧಾನಗಳ ಕುರಿತು ಅರಿವು ಹೊಂದುವುದು ಅತ್ಯಂತ ಅಗತ್ಯವಾಗಿದೆ ಎಂದು ಜವಳಿ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-2026ರ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಗೌರವವನ್ನು ಕಲ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರೀಮಂತ-ಬಡವ, ಅಧಿಕಾರಿ-ಸಾಮಾನ್ಯ ನಾಗರಿಕ ಎಂಬ ಭೇದವಿಲ್ಲದೆ ಪ್ರತಿಯೊಬ್ಬರ ಮತಕ್ಕೂ ಸಮಾನ ಮೌಲ್ಯವಿದೆ. ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸಂಸತ್ತಿನವರೆಗೆ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ವಿಸ್ತರಿಸಿದ್ದು ಜನರ ಪಾಲ್ಗೊಳ್ಳುವಿಕೆ ಮತ್ತು ಆಡಳಿತದಲ್ಲಿ ಪಾರದರ್ಶಕತೆಗೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿದ್ದರು. ಅವರ ವಿಚಾರಧಾರೆಗಳು ಇಂದಿಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾದರಿಯಾಗಿವೆ. ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರೊಂದಿಗೆ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

112 ವಿದ್ಯಾರ್ಥಿಗಳಿಂದ ಸದನ ಕಲಾಪ:

ಯುವ ಸಂಸತ್ತು ಅಧಿವೇಶನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಕಾಲೇಜುಗಳಿಂದ ಆಯ್ಕೆಯಾದ ಆಡಳಿತ ಪಕ್ಷದ 82 ಹಾಗೂ ವಿರೋಧ ಪಕ್ಷದ 40 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 112 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಧಾನಸಭೆಯ ಮಾದರಿಯಲ್ಲಿ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಲಾಪಗಳನ್ನು ನಡೆಸಲಾಯಿತು.

ಹಾವೇರಿ ವಿಶ್ವವಿದ್ಯಾಲಯದ ಕಲ್ಲನಗೌಡ ದೊಡ್ಡಗೌಡರ ಸಭಾಪತಿಯಾಗಿ, ಹಿರೇಕೆರೂರ ಸರ್ಕಾರಿ ಪದವಿಪೂರ್ವ ಕಾಲೇಜಿನ ಐಶ್ವರ್ಯ ಹದಗಲ ಉಪಸಭಾಪತಿಯಾಗಿ ಹಾವೇರಿಯ ಗಾಂಧಿಪುರ ಕಾಲೇಜಿನ ದಿವ್ಯಾ ಸಹಾನೆ ಮುಖ್ಯಮಂತ್ರಿಯಾಗಿ ಹಾಗೂ ರಾಣೇಬೆನ್ನೂರಿನ ಕಾನೂನು ಕಾಲೇಜಿನ ಗಂಗಾಧರಯ್ಯ ಇಂಗಳಗುಂದಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ಸಚಿವ ಸಂಪುಟದಲ್ಲಿ 20 ವಿದ್ಯಾರ್ಥಿಗಳಿಗೆ ವಿವಿಧ ಇಲಾಖೆಗಳ ಖಾತೆಗಳನ್ನು ಹಂಚಿಕೆ ಮಾಡಲಾಗಿತ್ತು.

ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ, ನಿಯಮ 69ರ ಅಡಿ ಚರ್ಚೆ, ಗಮನಸೆಳೆಯುವ ಪ್ರಶ್ನೆಗಳು ಹಾಗೂ ವಿಧೇಯಕಗಳ ಮಂಡನೆ ಸೇರಿದಂತೆ ವಿಧಾನಸಭೆಯ ವಿವಿಧ ಕಲಾಪಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ನಡೆಸಿಕೊಟ್ಟರು. ಶಿಕ್ಷಣ, ಆರೋಗ್ಯ, ಕೃಷಿ, ವಸತಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ, ಸಮಾಜ ಕಲ್ಯಾಣ, ಕಾರ್ಮಿಕ, ಸಾರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಜನಪರ ಸಮಸ್ಯೆಗಳ ಕುರಿತು ಚರ್ಚಿಸಿದರು.

ಗ್ರಾಮೀಣ ಭಾಗದ ಪತ್ರಕರ್ತರ ಸಮಸ್ಯೆಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು. ಆಡಳಿತ ಪಕ್ಷದ ವಿದ್ಯಾರ್ಥಿಗಳು ಸಚಿವರಾಗಿ ಪ್ರಶ್ನೆಗಳಿಗೆ ಉತ್ತರಿಸಿದರೆ, ವಿರೋಧ ಪಕ್ಷದ ವಿದ್ಯಾರ್ಥಿಗಳು ಸಾರ್ವಜನಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚರ್ಚೆಯಲ್ಲಿ ಪಾಲ್ಗೊಂಡರು.

ಪ್ರಮುಖ ವಿಧೇಯಕಗಳ ಮಂಡನೆ:

ಅಧಿವೇಶನದ ಪ್ರಮುಖ ಘಟ್ಟವಾಗಿ ಕರ್ನಾಟಕ ವಿಧಾನಸಭೆಯಲ್ಲಿ ಯುವಕರಿಗೆ ಪ್ರಾತಿನಿಧ್ಯ ಕಾಯ್ದೆ-2026 ವಿಧೇಯಕವನ್ನು ದೀಪಾ ಮರಿಗೌಡ್ರು ಮಂಡಿಸಿದರು. ಕೃತಕ ಬುದ್ಧಿಮತ್ತೆ ಮರುಕೌಶಲ್ಯ ಮಸೂದೆ-2026 ಅನ್ನು ಸುಮಾ ಡಿ. ಜಡಿಯಣ್ಣನವರ ಮಂಡಿಸಿದರು. ಎರಡೂ ವಿಧೇಯಕಗಳ ಕುರಿತು ವಿದ್ಯಾರ್ಥಿ ಪ್ರತಿನಿಧಿಗಳು ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಯುವ ಸಂಸತ್ತಿನ ಮೂಲಕ ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿ, ಪ್ರಶ್ನಿಸುವ ಮನೋಭಾವ, ಚರ್ಚೆ, ಸಂವಾದ ಹಾಗೂ ಭಿನ್ನಾಭಿಪ್ರಾಯಗಳಿಗೆ ಗೌರವ ನೀಡುವ ಸಂಸದೀಯ ಸಂಸ್ಕೃತಿಯನ್ನು ಪ್ರಾಯೋಗಿಕವಾಗಿ ಅರಿತುಕೊಂಡರು.

ಮಕ್ಕಳ ದಿನಾಚರಣೆ ಆಚರಣೆ:

ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಹಾಗೂ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆ ಆಚರಿಸಿ, ನೆಹರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಅಗಲಿದ ಗಣ್ಯರಾದ ಹಿರಿಯ ಗಾಯಕಿ ಎಸ್. ಜಾನಕಿ, ಸಚಿವ ಡಿ. ಸುಧಾಕರ ಹಾಗೂ ಬಿ.ಸಿ. ನಾಗೇಶ್ ಅವರಿಗೆ ಸಂತಾಪ ಸೂಚಿಸಲಾಯಿತು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಡಗಿ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್., ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜೀತ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

ಬುಧವಾರ ಸಕ್ಕರೆ ಸಚಿವರ ಮನೆಗೆ ಮುತ್ತಿಗೆ: ಕಬ್ಬು ಬೆಳೆಗಾರರ ಎಚ್ಚರಿಕೆ

Share this… Facebook Pinterest Twitter Linkedin Whatsappಬುಧವಾರ ಸಕ್ಕರೆ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ: ಕಬ್ಬು ಬೆಳೆಗಾರರ ಎಚ್ಚರಿಕೆ! ಕಬ್ಬಿನ ದರ ಘೋಷಣೆಗೆ ರೈತರ ಪಟ್ಟು; ಸಚಿವರ ಮನೆಗೆ ಮುತ್ತಿಗೆ ಹಾಕಿಸಿಕೊಳ್ಳಬಾರದು ಎಂದರೆ ಸರ್ಕಾರಕ್ಕೆ ಇನ್ನೂ ಎರಡು-ಮೂರು ದಿನಗಳ ಕಾಲಾವಕಾಶ…

ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಸಭೆ ರದ್ದು !!

Share this… Facebook Pinterest Twitter Linkedin Whatsappಹಾವೇರಿ: ಇಂದು ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ರದ್ದು; ರೈತರು ಸಭೆಗೆ ಬರುವುದು ಬೇಡ – ರೈತ ಸಂಘದ ಮನವಿ ಕರ‍್ಖಾನೆ ಮಾಲೀಕರು ಸಭೆಗೆ ಗೈರಾಗುವ ಮಾಹಿತಿ ಹಿನ್ನೆಲೆ; ರೈತ ಸಂಘದ ರಾಜ್ಯಾಧ್ಯಕ್ಷ…

You cannot copy content of this page