ಅನಾಧಿಕಾಲದಿoದಲೂ ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ಅತಿಕ್ರಮಣದಾರರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕೆಲಸ ಮುಂದುವರೆಸಿದೆ. `ಅತಿಕ್ರಮಣದಾರರಿಗೆ ತೊಂದರೆ ಕೊಡುವುದಿಲ್ಲ’ ಎಂದು ಭರವಸೆ ನೀಡಿದ ಅಧಿಕಾರಿಗಳು ಇದೀಗ ತಮ್ಮ ವರಸೆ ಬದಲಿಸಿದ್ದಾರೆ.
ಮೊನ್ನೆ ಶಿರಸಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯಾಧಿಕಾರಿಗಳು `ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ’ ಎಂದು ಪ್ರಮಾಣ ಮಾಡಿದ್ದರು. ಆದರೆ, ಅದಾದ ಮೂರೇ ದಿನದಲ್ಲಿ ಸಿದ್ದಾಪುರದಲ್ಲಿನ ಬಡ ಕುಟುಂಬದ ಮೇಲೆ ತಮ್ಮ ಅಸ್ತ್ರ ಪ್ರಯೋಗಿಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದವರಿಗೆ ಇದೀಗ ನೋಟಿಸ್ ನೀಡಿದ್ದು, ಅರ್ಜಿ ಮಂಜೂರಾತಿ ಹಂತದಲ್ಲಿರುವಾಗ ತಡೆ ಒಡ್ಡುವ ಪ್ರಯತ್ನ ನಡೆದಿದೆ.

ಸಿದ್ದಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಕ್ಯಾದಗಿಯ ಬಿಳೂಮನೆ ಕನ್ಯಾ ಪುಟ್ಟ ನಾಯ್ಕ ಹಾಗೂ ಕನ್ನಾ ಮಾರ್ಯ ನಾಯ್ಕ ಅವರಿಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆಯ ನೋಟಿಸ್ ಬಂದಿದೆ. `ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿರುವವರಿಗೆ ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೂ ಒಕ್ಕಲೆಬ್ಬಿಸುವ ಅಧಿಕಾರ ಈ ಅಧಿಕಾರಿಗಳಿಗೆ ಇಲ್ಲ. ಈ ಬಗ್ಗೆ ಕಾನೂನು ಸ್ಪಷ್ಟವಾಗಿ ತಿಳಿಸಿದ್ದರೂ ಅದನ್ನು ಅಧಿಕಾರಿಗಳು ಉಲ್ಲಂಗಿಸಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಆಕ್ಷೇಪಿಸಿದರು.

`ರೈತರನ್ನು ಮಾನಸಿಕವಾಗಿ ಕುಗ್ಗಿಸುವುದಕ್ಕಾಗಿ ಅರಣ್ಯ ಇಲಾಖೆ ಈ ರೀತಿ ನೋಟಿಸ್ ನೀಡುತ್ತಿದೆ. 35 ವರ್ಷದ ತೆಂಗು, ಅಡಿಕೆ ಮರಗಳು ಕ್ಷೇತ್ರದಲ್ಲಿದ್ದು ಭತ್ತ ಬೇಸಾಯ ಮಾಡುವ ಬಡವರಿಗೆ ಅನ್ಯಾಯವಾಗುತ್ತಿದೆ’ ಎಂದವರು ದೂರಿದರು.
ತಿಮ್ಮಪ್ಪರ ಆದೇಶಕ್ಕೆ ಇಲ್ಲ ಬೆಲೆ
`ಅರಣ್ಯವಾಸಿಯ ಒಟ್ಟು ಸಾಗುವಳಿ ಕ್ಷೇತ್ರ 3 ಎಕರೆಗಿಂತ ಕಡಿಮೆ ಇದ್ದರೆ ಅಂಥ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ಹಾಗಿಲ್ಲ’ ಎಂದು ವಿಧಾನಸಭಾ ಅಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಆದೇಶಿಸಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಈ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ. `ಸರ್ಕಾರದ ಆದೇಶವನ್ನು ಉಲ್ಲಂಗಿಸುತ್ತಿರುವ ಅರಣ್ಯಾಧಿಕಾರಿಗಳ ನಡೆ ಖಂಡನೀಯ’ ಎಂದು ರವೀಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
Discussion about this post