ನಿಮ್ಮ ಪರಿಚಯದಲ್ಲಿ ಯಾರಾದರೂ ರಸ್ತೆ ಅಪಘಾತದಿಂದ ನೊಂದಿದ್ದಾರಾ? ಹಾಗಾದರೆ, ಅಂಥವರ ಕುಟುಂಬಕ್ಕೆ ಸರ್ಕಾರದಿಂದ ಸಿಗಲಿದೆ ಸೂಕ್ತ ಪರಿಹಾರ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ಕಾಯಿದೆ ಪ್ರಕಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ ಹಾಗೂ ಸಾವನಪ್ಪಿದ ವ್ಯಕ್ತಿಯ ವಾರಸುದರರಿಗೆ 2 ಲಕ್ಷ ರೂ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸುತ್ತೋಲೆ ಹೊರಡಿಸಿದೆ.
ದೇಶದಲ್ಲಿ ಪ್ರತಿವರ್ಷ 60 ಸಾವಿರಕ್ಕೂ ಅಧಿಕ `ಹಿಟ್ ಅಂಡ್ ರನ್’ ಅಪಘಾತ ನಡೆಯುತ್ತಿದೆ. ಆದರೆ, ಇಂಥ ಪ್ರಕರಣದಲ್ಲಿ ಪರಿಹಾರ ಪಡೆದವರು 300 ಜನ ಮಾತ್ರ. ಕಾರಣ ಬಹುತೇಕ ಜಿಲ್ಲೆಗಳಲ್ಲಿ ಈ ಪರಿಹಾರ ಪಾವತಿ ಕುರಿತಂತೆ ಪರಿಶೀಲನೆ ನಡೆಸಬೇಕಾದ ಸಮಿತಿಯೇ ಇಲ್ಲ!
ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೀಗಾಗಿಲ್ಲ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಆಗಾಗ ಸಭೆ ಸೇರಿ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ನಡೆಸಿ, ಅರ್ಹ ಪ್ರಕರಣಗಳಿಗೆ ಪರಿಹಾರ ಪಾವತಿಗೆ ಈ ಸಮಿತಿ ಶಿಫಾರಸ್ಸು ಮಾಡುತ್ತಿದೆ.
ವಾಹನ ಅಪಘಾತವಾದರೆ ಅಪಘಾತಪಡಿಸಿದ ವಾಹನ ಮತ್ತು ಅಪಘಾತವಾದ ವಾಹನದ ವಿಮಾ ಮೊತ್ತದಿಂದ ನಷ್ಟ ಹೊಂದಿದವರಿಗೆ ಪರಿಹಾರ ಬರುವುದು ಎಲ್ಲರಿಗೂ ಗೊತ್ತು. ಆದರೆ, ಅಪರಿಚಿತ ವಾಹನಗಳ ಅಪಘಾತದಿಂದ ಆದ ನಷ್ಟಕ್ಕೂ ಪರಿಹಾರ ಸಿಗುವುದು ಅನೇಕರಿಗೆ ತಿಳಿದಿಲ್ಲ. ಯಾವ ವಾಹನ ಎಂದು ಗೊತ್ತಿಲ್ಲದೇ ನಡೆದ ಅಪಘಾತದಿಮದ ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರೂ ಸರ್ಕಾರ ಪರಿಹಾರ ಕೊಡುತ್ತದೆ.
ಏನು ಮಾಡಬೇಕು?
ಅಪಘಾತ ಗಂಭೀರ ಗಾಯಗೊಂಡ ವ್ಯಕ್ತಿ ಅಥವಾ ಮೃತನ ವಾರೀಸುದಾರರು ಅಪಘಾತ ನಡೆದ ಸ್ಥಳ ವ್ಯಾಪ್ತಿಯ ತಹಸೀಲ್ದಾರ್ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಪರಿಹಾರ ಕೋರುವ ಮನವಿಯ ಅರ್ಜಿ ಸಲ್ಲಿಸಬೇಕು. ಅಪಘಾತದ ವರದಿ ಮತ್ತು ಮರಣೋತ್ತರ ವರದಿ ಜೊತೆ ಅಗತ್ಯ ಗುರುತಿನ ಪತ್ರ ಒದಗಿಸಬೇಕು. ನಂತರ ಜಿಲ್ಲಾಧಿಕಾರಿಗಳು ವಿಮಾ ಕಂಪನಿಗೆ ಪರಿಹಾರ ಪಾವತಿಸುವಂತೆ ಆದೇಶಿಸುತ್ತಾರೆ.
Discussion about this post