ಮೂರ್ತಿ ಚಿಕ್ಕದಾದರೂ ಸೇವೆ ದೊಡ್ಡದು!
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಯಾಗಿರುವ ವಿನೋದ ಅಣ್ವೇಕರ್ ತಮ್ಮ ತಂದೆ ಶಿಕ್ಷಕರಾಗಿದ್ದ ಶಾಲೆಗೆ ಕಳೆದ ವರ್ಷ ವಿಶೇಷ ಮುತುವರ್ಜಿವಹಿಸಿ ಕೊಳವೆ ಬಾವಿಯೊಂದನ್ನು ತೆಗೆಸಿಕೊಟ್ಟಿದ್ದಾರೆ. ಬಸವ ವಸತಿ ಯೋಜನೆ ಅಡಿ ಮನೆ ಮಂಜೂರಾಗಿದ್ದರೂ 10 ವರ್ಷಗಳಿಂದ ಮನೆ ನಿರ್ಮಾಣ ಸಾಧ್ಯವಾಗದ ಹೊನ್ನಾವರದ ನಾಗವೇಣಿ ಶೆಟ್ಟಿ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯವನ್ನು ಮಾಡಿ, ಮನೆ ಕೆಲಸ ಮುಂದುವರೆಸಿದ್ದಾರೆ.
ಸರ್ಕಾರಿ ಕೆಲಸದ ವಿಷಯದಲ್ಲಿ ಅವರು ಎಂದಿಗೂ ರಾಜಿಯಾಗದ ಖಡಕ್ ಅಧಿಕಾರಿ. ಅಷ್ಟೇ ಜನಪರ ಕಾಳಜಿಯನ್ನು ಹೊಂದಿರುವ ಅವರು ಎಲ್ಲಿಯೂ ಆಗದ ಕೆಲಸವನ್ನು ತಮ್ಮ ವ್ಯಾಪ್ತಿಯ ಒಳಗೆ ತಮ್ಮದೇ ಆದ ಮುತುವರ್ಜಿಯಿಂದ ಮಾಡಿಕೊಡುತ್ತಾರೆ. ಇದಕ್ಕೆ ನಿದರ್ಶನಗಳು ನೂರಾರು. ಅವರ್ಸಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಒಟ್ಟು ಮೂರು ಬಾವಿಯಿದ್ದರೂ ಪ್ರತಿ ವರ್ಷ ಫೆಬ್ರವರಿ ನಂತರ ಕುಡಿಯಲು ನೀರು ಸಿಗುತ್ತಿರಲಿಲ್ಲ. ಹೀಗಾಗಿ ಇಲ್ಲಿನ 200ಕ್ಕೂ ಅಧಿಕ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಅಲ್ಲಿನ ಮುಖ್ಯ ಶಿಕ್ಷಕ ಮಂಜಪ್ಪ ಅಂಗರಗಟ್ಟಿ ಈ ಬಗ್ಗೆ ವಿನೋದ ಅಣ್ವೇಕರ್ ಅವರಲ್ಲಿ ಹೇಳಿಕೊಂಡಿದ್ದರು. ಇದಕ್ಕೊಂದು ಶಾಶ್ವತ ಪರಿಹಾರ ನೀಡುವ ಬಗ್ಗೆ ಚಿಂತಿಸಿದ ಅವರು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಶಾಲೆಗೆ ಕೊಳವೆ ಬಾವಿ ಮಾಡಿಸಿಕೊಟ್ಟರು. ಪ್ರಸ್ತುತ ಶಾಲೆಗೆ ಅಗತ್ಯವಿರುವ ರಂಗಮoದಿರ ಸಹ ನಿರ್ಮಾಣ ಹಂತದಲ್ಲಿದೆ.

ಹೊನ್ನಾವರದ ನಾಗವೇಣಿ ಶೆಟ್ಟಿ ಎಂಬಾತರಿಗೆ ದಶಕದ ಹಿಂದೆಯೇ ಬಸವ ವಸತಿ ಯೋಜನೆ ಅಡಿ ಮನೆ ಮಂಜೂರಾಗಿತ್ತು. ಆದರೆ, ಸರ್ಕಾರದಿಂದ ಬಂದ ನೆರವಿನಲ್ಲಿ ಮನೆ ನಿರ್ಮಾಣ ಸಾಧ್ಯವಿರಲಿಲ್ಲ. ಅವರ ಮನೆ ಪರಿಸ್ಥಿತಿ ಅರಿತ ವಿನೋದ ಅಣ್ವೇಕರ್ ತಮ್ಮ ಸ್ವಂತ ಸಂಬಳದಲ್ಲಿ ಅವರಿಗೆ ಆರ್ಥಿಕ ನೆರವು ನೀಡಿದರು. ಇದೀಗ ಮನೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ನಾಗವೇಣಿ ಶೆಟ್ಟಿ ಅವರು ಹೊಸಮನೆ ಪ್ರವೇಶಿಸುವ ತವಕದಲ್ಲಿದ್ದಾರೆ.
ವಿನೋದ ಅಣ್ವೇಕರ್ ಅವರ ತಂದೆ ಅವರ್ಸಾ ಶಾಲೆಯಲ್ಲಿ ಮುಖ್ಯಾಧ್ಯಪಕರಾಗಿದ್ದರು. ಆ ವೇಳೆ ಅವರು ನೆಟ್ಟಿದ್ದ ತೆಂಗು ಹಾಗೂ ಮಾವಿನ ಮರಗಳು ಇಂದಿನ ಬಿಸಿಯೂಟಕ್ಕೆ ಆಸರೆಯಾಗಿದೆ. ವಿನೋದ ಅವರು ಸಹ ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದು, ವಿನೋದ ಅವರ ಮಕ್ಕಳಾದ ರೋಹನ್ ಅಣ್ವೇಕರ್, ರೋಷನ್ ಅಣ್ವೇಕರ್ ಸಹ ಅಲ್ಲಿಯೇ ಕಲಿತವರು. ಹೀಗಾಗಿ ವಿನೋದ್ ಅವರಿಗೆ ಆ ಶಾಲೆಯ ಕುರಿತು ಎಲ್ಲಿಲ್ಲದ ಅಕ್ಕರೆ. ಹೀಗಾಗಿ ಹಬ್ಬ-ಹರಿದಿನಗಳಲ್ಲಿ ಅವರು ಶಾಲಾ ಮಕ್ಕಳ ಜೊತೆ ಬೆರೆತು ಸಿಹಿ ವಿತರಿಸುತ್ತಾರೆ. ಇದಲ್ಲದೇ ಹೊನ್ನಾವರದ 80 ಅಂಗನವಾಡಿಗಳಿಗೆ ವಿನೋದ್ ಅವರು ಮಾವು, ತೆಂಗಿನ ಗಿಡಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಅಂಕಿ – ಸಂಖ್ಯೆ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿದ್ದ ಅವಧಿಯಲ್ಲಿ ಸಹ ಅವರು ಸರ್ಕಾರಕ್ಕೆ ನಿರ್ಧಿಷ್ಟ ವರದಿ ಸಲ್ಲಿಸಿ, ಬೆಳೆ ವಿಮೆ ಸೇರಿದಂತೆ ಹಲವು ವಿಷಯಗಳಲ್ಲಿ ರೈತರಿಗೆ ನೆರವಾಗಿದ್ದರು.
Discussion about this post