ಸಿದ್ದಾಪುರ ತಾಲೂಕಿನ ಅವರೆಗೊಪ್ಪದ ಶಶಾಂಕ ನಾಯ್ಕ ಎಂಬಾತನ ಬ್ಯಾಂಕ್ ಖಾತೆಗೆ ಅಲ್ಪ ಪ್ರಮಾಣದ ಹಣ ಜಮಾ ಮಾಡಿದ ವಂಚಕರು ನಂತರ ಆತನಿಂದ 1.70 ಲಕ್ಷ ರೂ ವಸೂಲಿ ಮಾಡಿದ್ದಾರೆ.
ಆತ ಮೊಬೈಲ್ ನೋಡುತ್ತಿರುವಾಗ `ಆನ್‌ಲೈನ್ ಪ್ರೊಡೆಕ್ಟ್ ಕುರಿತು ಅಭಿಪ್ರಾಯ ಬರೆದರೆ ಹಣ ಕೊಡುತ್ತೇವೆ’ ಎಂಬ ವಿಷಯ ನೋಡಿ ವಂಚಕರನ್ನು ಈತ ಸಂಪರ್ಕಿಸಿದ್ದ. ಮೊದಲು ಆತನ ಖಾತೆಗ ವಂಚಕರು 180ರೂ ಜಮಾ ಮಾಡಿ ನಂಬಿಕೆ ಹುಟ್ಟಿಸಿದ್ದರು. ಇದರಿಂದ ಖುಷಿಯಾದ ವಿದ್ಯಾರ್ಥಿ ಕೆಲ ಪ್ರೊಡೆಕ್ಟ್ ಬಗ್ಗೆ ಅಭಿಪ್ರಾಯ ಹಂಚಿಕೊoಡಿದ್ದು, ವಂಚಕರ ನಯವಾದ ಮಾತಿಗೆ ಮನಸೋತು ಆತನೇ ಅವರ ಖಾತೆಗೆ 500ರೂ ಜಮಾ ಮಾಡಿದ್ದ. ಇದಾದ ತಕ್ಷಣ ಆತನ ಖಾತೆಗೆ 750ರೂ ಬಂದಿದ್ದು, ಮತ್ತೆ 250ರೂ ಲಾಭವಾಗಿದ್ದರಿಂದ ಖುಷಿಯಾದ ಆತ ಪ್ರೊಡೆಕ್ಟ್’ಗಳ ಬಗ್ಗೆ ನಿರಂತರವಾಗಿ ಅಭಿಪ್ರಾಯ ಬರೆಯುತ್ತಿದ್ದ.
ಇದಾದ ನಂತರ ವಂಚಕರ ಮಾತಿನಂತೆ ಬೇರೆ ಬೇರೆ ಬ್ಯಾಂಕ್ ಖಾತೆಗೆ 2 – 3 ಸಾವಿರ ರೂಪಾಯಿಗಳಂತೆ ಈತ ಹಣ ಹಾಕಿದ್ದು, ಇದಕ್ಕೆ ಪ್ರತಿಯಾಗಿ ಆತನಿಗೆ 6360 ರೂ ಜಮಾ ಆಗಿತ್ತು. ಅದಾದ ನಂತರ ವಂಚಕರು ಮತ್ತೆ 7500ರೂ ರೂ ಕೇಳಿದ್ದು, ಅದನ್ನು ಸಹ ಆತ ಪಾವತಿಸಿದ್ದ. ಹೀಗೆ ಅವರ ಹಣದ ವ್ಯವಹಾರ ಮುಂದುವರೆದಿತ್ತು. ಇದಾದ ನಂತರ ವಂಚಕರು ಶಶಾಂಕನನ್ನು ನಂಬಿಸಿ ಆತನ ತಂದೆಯ ಬ್ಯಾಂಕ್ ಖಾತೆಯಿಂದ 1.70 ಲಕ್ಷ ರೂ ಹಾಕಿಸಿಕೊಂಡಿದ್ದರು.
ಈ ಎಲ್ಲಾ ಹಣ ಹೂಡಿಕೆಗೆ ಪ್ರತಿಯಾಗಿ 2 ಲಕ್ಷಕ್ಕಿಂತ ಅಧಿಕ ಲಾಭ ಬರಲಿದ್ದು, ಕ್ರೆಡಿಟ್ ಸ್ಕೋರ್ ಜಾಸ್ತಿ ಮಾಡಿಕೊಳ್ಳಲು ಮತ್ತೆ 2 ಲಕ್ಷ ರೂ ಪಾವತಿಸುವಂತೆ ವಂಚಕರು ದುಂಬಾಲು ಬಿದ್ದಿದ್ದರು. ಇದಾದ ನಂತರ ಮೋಸ ಹೋಗಿರುವುದನ್ನು ಅರಿತ ಶಶಾಂಕ ನಾಯ್ಕ `ತಾನು ನೀಡಿದ ಹಣವನ್ನಾದರೂ ಮರಳಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದಾನೆ.
Discussion about this post