ಶಿರಸಿ ನಗರಸಭೆ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಉದ್ಯಮಿ ಉಪೇಂದ್ರ ಪೈ ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು `ಉಪೇಂದ್ರ ಪೈ ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಮೊದಲು ಸರಿಪಡಿಸಬೇಕು’ ಎಂದು ಸೂಚಿಸಿದ್ದಾರೆ.
`ಶಿರಸಿ ನಗರಸಭೆಯ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾತ್ರಿ 7 ಗಂಟೆಯ ನಂತರ ನಗರಸಭೆಗೆ ಹೋಗಿ ಕೆಲಸ ಮಾಡುತ್ತಾರೆ. ನಮೂನೆ ನಂ 3 ಮಾಡಿಕೊಡಲು ಹಣ ಪಡೆಯುತ್ತಾರೆ’ ಎಂದು ಉಪೇಂದ್ರ ಪೈ ಆರೋಪಿಸಿದ್ದರು. ಅವರ ಹೇಳಿಕೆಯನ್ನು ನಗರಸಭೆ ಸದಸ್ಯರು ಅಲ್ಲಗೆಳೆದರು. ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ `ಯಾರೂ ಸಹ ವಯಕ್ತಿಕ ಕೆಲಸಗಳಿಗಾಗಿ ನಗರಸಭೆಗೆ ಬರುವುದಿಲ್ಲ. ನಮೂನೆ ನಂ 3 ವಿಷಯದಲ್ಲಿ ಯಾವ ಸದಸ್ಯರೂ ಮೂಗು ತೂರಿಸುವುದಿಲ್ಲ. ತುರ್ತು ಸನ್ನಿವೇಶದಲ್ಲಿ ವಾರ್ಡಿನ ಸಮಸ್ಯೆ ಬಗೆಹರಿಸಲು ರಾತ್ರಿಯೂ ಕೆಲಸ ಮಾಡಿದ ಹೆಮ್ಮೆ ನಮಗಿದೆ’ ಎಂದು ಸಮಜಾಯಿಶಿ ನೀಡಿದರು.
ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ `ನಮೂನೆ 3ರ ವಿಷಯದಲ್ಲಿ ಅಕ್ರಮ ಹುಟ್ಟಿರುವುದೇ ಉಪೇಂದ್ರ ಪೈ ಅವರಂಥವರು ನಡೆಸುವ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ. ಅವರು ಕಟ್ಟಿದ ಕಟ್ಟಡಕ್ಕೆ ಸರಿಯಾದ ಪರವಾನಿಗೆ ಇಲ್ಲದ ಬಗ್ಗೆ ನೋಟಿಸ್ ನೀಡಲಾಗಿದ್ದು, ಮೊದಲು ಅವರು ತಮ್ಮ ವ್ಯವಹಾರ ಸರಿಯಾಗಿಸಿಕೊಳ್ಳಬೇಕು’ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್ ಮಾತನಾಡಿ `ಪೈ ಅವರು ಉಲ್ಲೇಖಿಸಿರುವ 15 ಸದಸ್ಯರು ಯಾರು ಎಂದು ಹೇಳಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.
Discussion about this post