ಕಾನೂನಿನ ಪ್ರಕಾರ ರಾತ್ರಿ ವೇಳೆ ಮಹಿಳೆಯರ ವಿಚಾರಣೆ-ಬಂಧನಕ್ಕೆ ಪೊಲೀಸರೇ ಬರುವ ಹಾಗಿಲ್ಲ. ಹೀಗಿರುವಾಗ ಒಂಟಿ ಮಹಿಳೆಯ ಮನೆಗೆ ಹಣಕಾಸು ಸಂಸ್ಥೆ ಸಿಬ್ಬಂದಿ ಮದ್ಯ ಸೇವಿಸಿ ಬಂದರೆ ಜನ ಬಿಡುತ್ತಾರಾ? ಸಾಲ ವಸೂಲಿ ನೆಪದಲ್ಲಿ ಮಹಿಳೆ ಮನೆಗೆ ನುಗ್ಗಿದ್ದ ಇಬ್ಬರು ಫೈನಾನ್ಸ್ ಸಿಬ್ಬಂದಿಗೆ ಹಳಿಯಾಳದ ಜನ ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ಕಲಘಟಗಿಯ ಭಾರತ್ ಫೈನಾನ್ಸ್’ನವರು ಹಳಿಯಾಳದ ಮೇದಾರಗಲ್ಲಿಯ ಹಸೀನ ಎಂಬಾತರಿಗೆ ಸಾಲ ನೀಡಿದ್ದರು. ವರ್ಷದ ಹಿಂದೆ ಸಾಲ ಪಡೆದಿದ್ದ ಹಸೀನ ಕಂತು ಪಾವತಿಸುತ್ತಲೇ ಬಂದಿದ್ದರು. ಆದರೆ, ಈ ಬಾರಿ ಕಂತು ಪಾವತಿಗೆ ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಫೈನಾನ್ಸಿನವರು ನೋಟಿಸ್ ನೀಡಿದ್ದು, ಎರಡು ದಿನ ಸಮಯಾವಕಾಶವನ್ನು ಹಸಿನಾ ಕೇಳಿದ್ದರು. ಆಗ ಇದಕ್ಕೆ ಒಪ್ಪಿ ಮ್ಯಾನೇಜರ್ ಮರಳಿದ್ದರು.
ಜು 6ರ ರಾತ್ರಿ ಫೈನಾನ್ಸ್’ನ ಮ್ಯಾನೇಜರ್ ತನ್ನ ಇಬ್ಬರು ಸಿಬ್ಬಂದಿ ಜೊತೆ ಮತ್ತೆ ರಾತ್ರಿ ವೇಳೆ ಆಗಮಿಸಿ ಹಣ ಕೊಡುವಂತೆ ಪೀಡಿಸಿದ್ದು, ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದ್ದನ್ನು ತಿಳಿದ ಸುತ್ತಲಿನವರು ಆ ಮೂವರು ಫೈನಾನ್ಸ್ ಸಿಬ್ಬಂದಿಗೆ ಬುದ್ದಿ ಕಲಿಸಿದ್ದಾರೆ. ಹಸಿನಾ ಸಹ ಮ್ಯಾನೇಜರ್ ಸೇರಿ ಇನ್ನಿಬ್ಬರ ವಿರುದ್ಧ ದೂರಿದ್ದಾರೆ.
Discussion about this post