ಆಧಾರ್ ಕಾರ್ಡ ಬೇಡ, ಪಾನ್ ಕಾರ್ಡ ಬೇಡ. ಸಬಿಲ್ ಸ್ಕೋರ್ ಸಂಬoಧವೇ ಇಲ್ಲ. ಆಸ್ತಿ ಪತ್ರ – ಮನೆ ಪತ್ರದ ದಾಖಲೆಗಳು ಬೇಡ. ಬರೇ 25 ಸಾವಿರ ರೂ ಕೊಟ್ಟರೆ ಸಾಕು. 25 ಲಕ್ಷ ರೂ ಸಾಲ ಸಿಗುತ್ತದೆ!
ಮಹಿಳೆಯರನ್ನು ಮುಖ್ಯ ಗುರಿಯಾಗಿರಿಸಿಕೊಂಡು ಹಣಪೀಕುವ ಜಾಲ ಯಲ್ಲಾಪುರದಲ್ಲಿದ್ದು, ನೂರಾರು ಮಹಿಳೆಯರು ಮೋಸ ಹೋಗಿದ್ದಾರೆ. `ವಿಜಯ – ವಿಠಲ’ ಎಂದು ದೇವರ ಹೆಸರಿನಲ್ಲಿ ಮುಗ್ದರನ್ನು ನಂಬಿಸಿದ ವಂಚಕರು ಇದೀಗ ಫೋನ್ ಬಂದ್ ಮಾಡಿಕೊಂಡಿದ್ದಾರೆ. ಗೃಹ ಕೈಗಾರಿಕೆ ನಡೆಸಲು ಸಾಲ ಸಿಗುತ್ತದೆ ಎಂಬ ಆಸೆಯಿಂದ ಕಾಸು ಕೊಟ್ಟವರಿಗೆ ಸಾಲವೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿಲ್ಲ!
ಉದ್ಯೋಗ ಹುಡುಕುತ್ತಿರುವ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರಿಗೆ `ಪಿ ಎಂ ಇ ಜಿ ಪಿ’ ಯೋಜನೆ ಅಡಿ ಸಾಲ ಕೊಡಿಸುವುದಾಗಿ ವಂಚಕರು ಬಲೆ ಬೀಸುತ್ತಾರೆ. ನಂಬಿಕೆ ಹುಟ್ಟುವ ರೀತಿ ಮಾತನಾಡಿ, ಹಣ ಪೀಕಿಸುತ್ತಾರೆ. ಈವರೆಗೆ ನೂರಾರು ಮಹಿಳೆಯರು ಹಣ ಕೊಟ್ಟು ಸಾಲ ಸಿಗದೇ ಕೈ ಸುಟ್ಟಿಕೊಂಡಿದ್ದಾರೆ. ಒಂದೆರಡು ಬಾರಿ ಹಣಪಡೆದವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಯತ್ನಿಸಿದ್ದು, ಆ ವೇಳೆ ವಂಚಕರು ಕೆಲವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.
`ಹಣ ಇಲ್ಲ’ ಎಂದವರಿಗೆ ಬೇರೆ ಕಡೆ ಸಾಲ ಮಾಡಿ ಆದರೂ ಹಣ ತಂದುಕೊಡುವoತೆ ಪೀಡಿಸುತ್ತಾರೆ. ಕೆಲವರು ಮನೆಯಲ್ಲಿದ್ದ ಹಣವನ್ನು ಕದ್ದು ಈ ವಂಚಕರ ಕೈಗೆ ಕೊಟ್ಟಿರುವುದು ಇದೆ. ಹೀಗಾಗಿ ಹಣ ಕಳೆದುಕೊಂಡವರು ಈ ವಿಷಯವನ್ನು ದೊಡ್ಡವರಿಗೆ ಹೇಳಲು ಆಗುತ್ತಿಲ್ಲ. ಅವರಿಗೆ ಪೊಲೀಸ್ ನೆರವು ಪಡೆಯಲು ಧೈರ್ಯವಿಲ್ಲ. ಇದನ್ನು ಅರಿತ ವಂಚಕರು ಇನ್ನಷ್ಟು ಜನರಿಗೆ ವಂಚಿಸುವ ಕೆಲಸ ಮುಂದುವರೆಸಿದ್ದಾರೆ.
Discussion about this post