ವಿದ್ಯೆ ಕಲಿಯುವ ವಯಸ್ಸಿನಲ್ಲಿ ಹವ್ಯಾಸಕ್ಕೆ ಕಲಿತ ಪಂಚವಾದ್ಯಗಳು ನಾಲ್ವರ ಬದುಕಿಗೆ ದಾರಿ ತೋರಿದೆ. ಸಂಸಾರದ ನೊಗ ಹೊತ್ತಿದ್ದ ತಂದೆಯ ಅಗಲಿಕೆಯ ಬಳಿಕ ಅತಂತ್ರರಾಗಿದ್ದ ಮಕ್ಕಳು ಹೊಟ್ಟೆಪಾಡಿಗಾಗಿ ವಾದ್ಯ ನುಡಿಸಿ ಜೀವನ ಕಂಡುಕೊoಡಿದ್ದಾರೆ.
ಭಟ್ಕಳದ ಮಣ್ಕುಳಿಯ ಮಂಜುನಾಥ ದೇವಾಡಿಗ 2011ರಲ್ಲಿ ಸಾವನಪ್ಪಿದ್ದಾಗ ಅವರ ನಾಲ್ವರು ಮಕ್ಕಳಿಗೆ ಆಸರೆಯಿರಲಿಲ್ಲ. ಆದರೂ ಅವರು ಬದುಕಿನಲ್ಲಿ ಸ್ವಾವಲಂಬಿಗಳಾದರು. ಕಠಿಣ ಪರಿಶ್ರಮದಿಂದ ಅಕ್ಷತಾ, ಅಮೃತಾ, ಆದಿತ್ಯಾ ಹಾಗೂ ಅರ್ಪಿತಾ ಪರಂಪರಾಗತವಾಗಿ ಬಂದ ಪಂಚವಾದ್ಯವನ್ನು ನುಡಿಸಿ ಜೀವನ ಶುರು ಮಾಡಿದರು. ಅವರೆಲ್ಲರೂ ತಾಯಿ ಶಾರದಾ ದೇವಾಡಿಗ ಸಲಹೆಯಂತೆ ಮದುವೆ, ಮುಂಜಿ, ದೇವರ ಕಾರ್ಯಗಳಿಗೆ ಪಂಚವಾದ್ಯ ನುಡಿಸಲು ತೆರಳಿದರು. ಈ ನಾಲ್ವರು ಕುಟುಂಬ ನಿರ್ವಹಣೆಗಾಗಿ ದಿನವಿಡಿ ದುಡಿದರು. ಓದಿನ ನಡುವೆಯೇ ಪಂಚವಾದ್ಯ ನುಡಿಸಿ ಬದುಕುಕಟ್ಟಿಕೊಂಡರು.
ತoದೆ ಕಾರ್ಯಕ್ರಮಗಳಿಗೆ ವಾದ್ಯ ನುಡಿಸಲು ತೆರಳಿದಾಗ ಅವರ ಜತೆಯಲ್ಲಿಯೇ ನಾಲ್ವರು ತೆರಳುತ್ತಿದ್ದರು. ಅವರು ನುಡಿಸುವುದನ್ನೇ ನೋಡಿ ಕರಗತ ಮಾಡಿಕೊಂಡಿದ್ದರು. `ಪಂಚ ವಾದ್ಯಗಳಲ್ಲಿ ಡೋಲಕ್, ತಾಳ, ಹಾರ್ಮೋನಿಯಮ್‌ನ್ನು ಕಲಿಯುವುದು ಹಾಗೂ ನುಡಿಸುವುದು ಸುಲಭ. ಆದರೆ ಸೆಕ್ಸೋಫೋನ್ ನುಡಿಸಲು ತರಬೇತಿ ಪಡೆದಿರಬೇಕು. ಜತೆಗೆ ಉಸಿರು ಬಿಗಿ ಹಿಡಿದು ನುಡಿಸುವಷ್ಟು ದೈಹಿಕ ಸಾಮರ್ಥ್ಯ ಬೇಕು’ ಎಂಬುದನ್ನು ಅವರು ಅರಿತರು. ಇದನ್ನು ಆದಿತ್ಯ ಕರಗತಮಾಡಿಕೊಂಡಿದ್ದು, ಭಾವಗೀತೆ, ಭಕ್ತಿಗೀತೆ, ಚಲನ ಚಿತ್ರ ಗೀತೆಗಳಿಗೆ ಈ ತಂಡ ಪ್ರಸಿದ್ಧ.
ಯಕ್ಷಗಾನ ಬಯಲಾಟ, ಚೆಂಡೆ ವಾದನದಲ್ಲಿಯೂ ಸಹ ಇವರು ಸಾಧನೆ ಮಾಡಿದ್ದಾರೆ. ಆದಿತ್ಯ ತಬಲಾ, ಶಹನಾಯಿ, ಯಕ್ಷಗಾನದ ತರಬೇತಿ ಪಡೆಯುತ್ತಿದ್ದಾರೆ. ಅದಕ್ಕೂ ಮುನ್ನ ಚೆಂಡೆ ವಾದನಗಳಲ್ಲಿಯೂ ಇವರು ಭಾಗವಹಿಸುತ್ತಿದ್ದರು. ತನ್ನ ಬಿಡುವಿನ ದಿನಗಳಲ್ಲಿ ಮೇಳಗಳಲ್ಲಿ ಭಾಗವಹಿಸಿ ಯಕ್ಷಗಾನ ಪ್ರದರ್ಶನ ನೀಡುವುದಿದೆ. ಇವರ ಸಾಧನೆಗೆ ರಾಜ್ಯ ಮಟ್ಟದ `ಆಶಾ ದೀಪ ಪುರಸ್ಕಾರ’ವೂ ದೊರೆತಿದೆ.
Discussion about this post