ಜೊಯಿಡಾ: ಮಳೆ ಸಂತ್ರಸ್ತರ ಹಸಿವು ಅರಿತು ಅವರಿಗೆ ಊಟ ಕೊಡಲು ನಡುರಾತ್ರಿ ಅಡುಗೆ ಮಾಡಿಸಿಕೊಂಡು ಹೋಗಿದ್ದ ಸಯ್ಯದ ಮುರ್ತುಜಾ ಎಂಬಾತರು ಅಪಘಾತದಲ್ಲಿ ಕೈ ಮುರಿದುಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಬೆಳಗಾವಿ ಪಣಜಿ ಹೆದ್ದಾರಿಯ ತಗ್ಗು ಪ್ರದೇಶದಲ್ಲಿ ನೀರು ತುಂಬಿದೆ. ಇದರಿಂದ ವಾಹನ ಸವಾರರು ಮುಂದೆ ಚಲಿಸಲಾಗದೇ ಸಿಲುಕಿಕೊಂಡಿದ್ದಾರೆ. ಎಲ್ಲಡೆ ನೀರು ಆವರಿಸಿರುವುದರಿಂದ ವಾಹನ ಸವಾರರಿಗೆ ರಸ್ತೆ ಎಲ್ಲಿದೆ? ಎಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ತಿನೈಘಾಟ್’ನ ಸಯ್ಯದ್ ಮುರ್ತುಜಾಗೆ ಆತನ ಗೆಳೆಯರು ಫೋನ್ ಮಾಡಿ ನಾಲ್ಕು ಜನ ಮಳೆಯಲ್ಲಿ ಸಿಲುಕಿರುವ ಬಗ್ಗೆ ತಿಳಿಸಿದ್ದರು. ಸಯ್ಯದ್, ಆ ನಾಲ್ವರು ಸಂತ್ರಸ್ತರಿಗೆ ಊಟ ಕೊಡುವುದಕ್ಕಾಗಿ ಮನೆಯಲ್ಲಿ ಹೇಳಿ ಅಡುಗೆ ಮಾಡಿಸಿದ್ದರು. ರಾತ್ರಿ 11 ಗಂಟೆಯ ವೇಳೆಗೆ ಮಳೆಯಲ್ಲಿ ನೆನೆದವರಿಗೆ ಊಟ ಕೊಟ್ಟು ಮರಳುವಾಗ ದೇವಳ್ಳಿ ಗ್ರಾಮದ ತಿರುವಿನಲ್ಲಿ ಅವರ ಬೈಕ್ ಅಪಘಾತವಾಗಿದೆ. ಬೈಕಿನಿಂದ ಬಿದ್ದ ಸಯ್ಯದ್ ಅವರ ಮೂಗಿನಲ್ಲಿ ರಕ್ತಬಂದಿದ್ದು, ಕೈ ಮೂಳೆ ಮುರಿದಿದೆ. ಎದೆ ಭಾಗಕ್ಕೂ ಪೆಟ್ಟಾಗಿದೆ. ಬೆಳಗ್ಗೆವರೆಗೂ ಅಲ್ಲಿಯೇ ಹೊರಳಾಟ ನಡೆಸಿದ ಅವರನ್ನು 8 ಗಂಟೆ ಸುಮಾರಿಗೆ ನೋಡಿದ ಜನ ಆಸ್ಪತ್ರೆಗೆ ಸೇರಿಸಿದ್ದಾರೆ.
Discussion about this post