ಶಿರಸಿ: ಶನಿವಾರ ರಾತ್ರಿ ಶಿರಸಿಯ ಗಣೇಶನಗರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ರಾಜು ಮೋಹನ್ ಗೋಸಾವಿ ಅವರ ಮಣ್ಣಿನ ಮನೆ ಹಿಂಬಾಗ ಕುಸಿದು ಬಿದ್ದಿದೆ.
ಗೋಸಾವಿಗಲ್ಲಿಯಲ್ಲಿ ಕೆಂಪುಕಲ್ಲುಗಳನ್ನು ಬಳಸಿ ಅವರು ಮನೆಯ ಮುಂದಿನ ಭಾಗ ಕಟ್ಟಿಕೊಂಡಿದ್ದು, ಅಡುಗೆ ಮನೆ ಹಾಗೂ ಮಲಗುವ ಕೋಣೆಯನ್ನು ಮಣ್ಣಿನ ಗೋಡೆಯಿಂದ ನಿರ್ಮಿಸಿದ್ದರು. ಮನೆ ಮೇಲೆ ಹಂಚುಗಳನ್ನು ಹೊದಿಕೆಯಾಗಿಸಿಕೊಂಡಿದ್ದರು. 20 ವರ್ಷ ಹಿಂದಿನ ಮನೆ ಇದಾಗಿದ್ದು, ಸುರಿದ ಮಳೆಗೆ ಗೋಡೆಗಳು ನೆಲಕಚ್ಚಿವೆ. ಅಡುಗೆ ಮನೆಯಲ್ಲಿದ್ದ ಪಾತ್ರೆಗಳೆಲ್ಲವೂ ಮಣ್ಣು ಪಾಲಾಗಿದೆ. ಇನ್ನೂ ಒಂದು ಗೋಡೆ ಬೀಳುವ ಹಂತದಲ್ಲಿದ್ದು, ಅದು ಕುಸಿದರೆ ಇಡೀ ಮನೆ ನೆಲಸಮವಾಗುವ ಲಕ್ಷಣಗಳಿವೆ.
65 ವರ್ಷದ ರಾಜು ಅವರ ಮನೆಯಲ್ಲಿ ಮೂರು ಮಕ್ಕಳು ಸೇರಿ ಎಂಟು ಜನ ವಾಸವಾಗಿದ್ದಾರೆ. ರಾಜು ಅವರ ತಾಯಿ ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ರಾಜು ಅವರ ತಂದೆ 2 ವರ್ಷಗಳ ಹಿಂದೆ ಅಪಘಾತದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದು, ತಾಯಿ-ಮಕ್ಕಳ ದುಡಿಮೆಯೇ ಬದುಕಿಗೆ ಆಧಾರ. ಪ್ರಸ್ತುತ ಮನೆ ಮುರಿದ ಪರಿಣಾಮ ಅವರಿಗೆ ಅಂದಾಜು 3 ಲಕ್ಷ ರೂ ಹಾನಿಯಾಗಿದೆ.
ಶನಿವಾರ ರಾತ್ರಿ ಮಳೆಗೆ ಮನೆ ಕುಸಿದಿದ್ದರಿಂದ ಕಂದಾಯ ಅಧಿಕಾರಿಗಳಿಗೆ ಈವರೆಗೆ ಮಾಹಿತಿ ತಲುಪಿಲ್ಲ. ಮಳೆಯಿಂದ ಮನೆ ಕುಸಿದಲ್ಲಿ ಜಿಲ್ಲಾಡಳಿತ ಪರಿಹಾರ ನೀಡುತ್ತಿದ್ದು, ಹಾನಿ ಪರಿಶೀಲಿಸಿ ತಮಗೂ ನೆರವು ನೀಡುವಂತೆ ರಾಜು ಅವರ ಕುಟುಂಬದವರು ಮನವಿ ಮಾಡಿದ್ದಾರೆ.
ಮಳೆಯಿಂದ ಹಾನಿಗೆ ಒಳಗಾದ ಮನೆಯ ವಿಡಿಯೋ ಇಲ್ಲಿ ನೋಡಿ..
Discussion about this post