ನ್ಯಾಯಾಲಯ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ | ಪ್ರೀತಿ ವಿಶ್ವಾಸಕ್ಕೆ ಹೆಚ್ಚಿನ ಮನ್ನಣೆ | ಸಮಾಜದ ಹಿತ ಕಾಯುವ ಅದಾಲತ್
ಕುಸ್ತಿ ಹೊಡೆದು ಕೋರ್ಟಿಗೆ ಬಂದವರು ಸಹ ಸ್ನೇಹಿತರಾಗಿ ಸಹಬಾಳ್ವೆ ನಡೆಸುವ ವಾಗ್ದಾನ ಮಾಡಿದರು. ವರ್ಷವಿಡೀ ಕಚ್ಚಾಟ ನಡೆಸಿ ಬೇರೆಯಾಗುವ ನಿರ್ಣಯ ಮಾಡಿದ ದಂಪತಿ ಜೀವನದುದ್ದಕ್ಕೂ ಒಟ್ಟಿಗೆ ಬದುಕುವ ಶಪಥ ಮಾಡಿದರು. ಇಂಥ ಅನೇಕ ಭಾವನಾತ್ಮಕ ಸನ್ನಿವೇಶಗಳಿಗೆ ನ್ಯಾಯ ದೇವತೆ ಸಾಕ್ಷಿಯಾಗಿದೆ.
ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳನ್ನು ರಾಜಿ – ಸಂದಾನದ ಮೂಲಕ ಬಗೆಹರಿಸಲು ನ್ಯಾಯಾಧೀಶರು ಉತ್ಸಾಹ ತೋರಿದ್ದಾರೆ. ಈ ಕಾರ್ಯಕ್ಕೆ ನ್ಯಾಯವಾದಿಗಳು ಸಹ ಕೈ ಜೋಡಿಸಿದ್ದು, ದ್ವೇಷ ಭಾವನೆ ಕಡಿಮೆ ಮಾಡಿ ಪ್ರೀತಿ-ಸಹಕಾರದ ಬದುಕು ನಡೆಸಲು `ಲೋಕ ಅದಾಲತ್’ ಸಹಕಾರಿಯಾಗಿದೆ.
ದಾಯಾದಿಗಳ ಕಲಹ, ಬ್ಯಾಂಕು-ಸೊಸೈಟಿ ವಿವಾದ, ಹಣಕಾಸಿನ ವ್ಯವಹಾರ, ಸಣ್ಣ-ಪುಟ್ಟ ಹೊಡೆದಾಟ, ಕೌಟುಂಬಿಕ ವ್ಯಾಜ್ಯಗಳನ್ನು ಸಹ ಲೋಕ ಅದಾಲತ್’ನಲ್ಲಿ ಬಗೆಹರಿಸಲಾಗುತ್ತದೆ. ಕಕ್ಷಿದಾರರ ಸಮಯ ಹಾಗೂ ಹಣ ಉಳಿಸುವ ಮುಖ್ಯ ಉದ್ದೇಶದ ಜೊತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವ ಬುದ್ದಿ ಮಾತುಗಳನ್ನು ನ್ಯಾಯಾಧೀಶರು ಹೇಳುತ್ತಿದ್ದಾರೆ. ಅನೇಕ ವರ್ಷಗಳಿಂದ ನಡೆಯುತ್ತಿದ್ದ ಕಲಹ ಹಾಗೂ ವ್ಯಾಜ್ಯಗಳಿಗೆ ನ್ಯಾಯಾಲಯ ಇತಿಶ್ರೀ ಹಾಡಿದೆ. ದ್ವೇಷದ ಮನೋಭಾವನೆ ಹೊಂದಿದವರಿಗೆ ಸಹಬಾಳ್ವೆಯ ಸಂದೇಶ ಸಾರಿದೆ.
ಯಲ್ಲಾಪುರದಲ್ಲಿ ನಡೆದ ಲೋಕ್ ಅದಾಲತ್’ನಲ್ಲಿ ನ್ಯಾ ಗುಡ್ಡಬ್ಬ ಹಳ್ಳಾಕಾಯಿ ಹಾಗೂ ನ್ಯಾ ಲಕ್ಷ್ಮೀಬಾಯಿ ಪಾಟೀಲ್ ಸೇರಿ 215 ಪ್ರಕರಣಗಳನ್ನು ರಾಜಿ ಮಾಡಿಸಿದರು. ಇಲ್ಲಿ ವಕೀಲರಾದ ರವಿಶಿವನ ಗೌಡ ಪಾಟೀಲ್, ತೇಜಶ್ವಿ ಹೆಗಡೆ, ಸರಸ್ವತಿ ಭಟ್ಟ, ಎನ್ ಟಿ ಗಾಂವ್ಕರ್, ಝಿನತ್ ಶೇಖ್ ಕಕ್ಷಿದಾರರಿಗೆ ಕಿವಿಮಾತು ಹೇಳಿದರು. ಭಟ್ಕಳದ ಮೂರು ನ್ಯಾಯಾಲಯದಲ್ಲಿ 170 ಪ್ರಕರಣಗಳು ರಾಜಿಯಾಗಿದ್ದು, ಇಲ್ಲಿ ಸಹ ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ಹಣ ದೊರೆಯಿತು. ನ್ಯಾ ಕಾಂತ ಕುರಣಿ, ನ್ಯಾ ದೀಪಾ ಅರಳಗುಂಡಿ, ನ್ಯಾ ಧನವತಿ ವಿಶೇಷ ಮುತುವರ್ಜಿವಹಿಸಿ ನ್ಯಾಯದಾನ ಮಾಡಿದರು.
ವಕೀಲರಾದ ಗಣೇಶ ದೇವಾಡಿಗ, ಆರ್ ಆರ್ ಶ್ರೇಷ್ಟಿ, ಜೆ ಡಿ ನಾಯ್ಕ, ಎಂ ಎಲ್ ನಾಯ್ಕ, ಎಸ್ ಬಿ. ಬೊಮ್ಮಾಯಿ, ಮಹೇಶ ನಾಯ್ಕ, ಎಂ ಟಿ.ನಾಯ್ಕ ಮೊದಲಾದವರು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸಿದರು.
ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.
Discussion about this post