ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾರಾಯಣ ಗುನಗಿ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಿವೃತ್ತಿ ನಂತರವೂ ಅವರು ಉತ್ಸಾಹದಿಂದ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಅವರು ಇದೀಗ ಕೃಷಿ ಆಸಕ್ತರಿಗೆ ಗದ್ದೆಯಲ್ಲಿ ಪಾಠ ಮಾಡುತ್ತಾರೆ.
ನಾರಾಯಣ ಗುನಗಿ ಅವರು ಮುಖ್ಯವಾಗಿ ಆಹಾರ ಬೆಳೆಗಳನ್ನು ಬೆಳೆಯುತ್ತಾರೆ. ಭತ್ತ, ಶೇಂಗಾ, ಉದ್ದು, ಅಲಸಂದೆ ಅವರಲ್ಲಿನ ಪ್ರಮುಖ ಬೆಳೆಗಳು. ಬಗೆಬಗೆಯ ತರಕಾರಿ ಸಹ ಸ್ವತ: ಬೆಳೆದು ಉಪಯೋಗಿಸುತ್ತಾರೆ. ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಗೇರಿಗೂ ಸಮಾನ ಆದ್ಯತೆ ನೀಡಿದ್ದಾರೆ. ಸಾಂಬಾರು ಬೆಳೆಯಾದ ಕರಿಮೆಣಸು ಪ್ರಯೋಗಕ್ಕೂ ಅವರು ಇಳಿದಿದ್ದು, ಅರಣ್ಯ ಬೆಳೆಗಳಾದ ಸಾಗವಾನಿ, ಮಹಾಗನಿ ಗಿಡಗಳನ್ನು ಬೆಳೆಸಿದ್ದಾರೆ.
ಬೇಸಿಗೆ ಬಂದಾಗ ಶೇಂಗಾ, ಉದ್ದು, ಅಲಸಂದೆ ಬಿತ್ತನೆ ಮಾಡುತ್ತಾರೆ. ಆ ವೇಳೆ ಸೊಪ್ಪು ತರಕಾರಿ ಸಹ ಉತ್ತಮವಾಗಿರುತ್ತದೆ. ಮಳೆಗಾಲದಲ್ಲಿ ಭತ್ತ ಬಿತ್ತನೆ ಮಾಡುತ್ತಾರೆ. ಉಳಿದ ಖಾಲಿ ಜಾಗದಲ್ಲಿ ಗೇರು, ಹಲಸು, ಸಾಗುವಾನಿ ಗಿಡ ನಾಟಿ ಮಾಡಿದ್ದಾರೆ. ತೋಟದ ನಡುವೆ ಜೇನು ಪೆಟ್ಟಿಗೆಗಳನ್ನು ಇರಿಸಿದ್ದು, ಬರಪೂರ ತುಪ್ಪವನ್ನು ತೆಗೆಯುತ್ತಾರೆ.
ಎರಡು ವರ್ಷದ ಹಿಂದೆ ನಾರಾಯಣ ಗುನಗಿ ನಿವೃತ್ತರಾದರು. ನಿವೃತ್ತಿ ಮುನ್ನ ವಾರಾಂತ್ಯದ ಕೃಷಿ ಕಾಯಕ ಮಾಡುತ್ತಿದ್ದ ಅವರು ಇದೀಗ ಪೂರ್ಣಾವಧಿ ಕೃಷಿಯಲ್ಲಿ ಮುಳುಗಿದ್ದಾರೆ. ಕಾರವಾರ ತಾಲೂಕಿನ ಸಿದ್ಧರ ಬಳಿಯಿರುವ ಮುದಗಾಗೆ ಬಂದರೆ ನಾರಾಯಣ ಗುನಗಿ ಅವರ ಅಚ್ಚುಕಟ್ಟಾದ ತೋಟ ಕಾಣುತ್ತದೆ.
Discussion about this post