ಯಲ್ಲಾಪುರ: ಪಟ್ಟಣದ ಎಲ್ಲೆಂದರಲ್ಲಿ ಅನಧಿಕೃತ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ತಟಗಾರ ಹಾಗೂ ಸುತ್ತಲಿನ ಪ್ರದೇಶದ ಜನ ಪಟ್ಟಣ ಪಂಚಾಯತಗೆ ದೂರು ನೀಡಿದ್ದು, ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಜನರ ಎದುರು ಅಸಹಾಯಕತೆ ವ್ಯಕ್ತಪಡಿಸಿದರು.
‘ಜೋಡುಕೆರೆ ಹಾಗೂ ತಟಗಾರ ತಿರುವಿನಲ್ಲಿ ಅನಧಿಕೃತವಾಗಿ ಮೀನು ಮಾರಾಟ ನಡೆದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮೀನು ಖರೀದಿಗೆ ಬರುವವರು ರಸ್ತೆ ಮೇಲೆ ನಿಲ್ಲುತ್ತಿದ್ದು, ವಾಹನಗಳ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ’ ಎಂದು ಜನ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ ಪಂ ಮುಖ್ಯಾಧಿಕಾರಿ ‘ಈಗಾಗಲೇ ಮೀನು ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ, ಅವರು ನಮ್ಮ ವಿರುದ್ಧವೇ ದೂರುತ್ತಿದ್ದಾರೆ. ಪ್ರಭಾವಿಗಳು ಅವರ ಬೆಂಬಲಕ್ಕಿದ್ದಾರೆ’ ಎಂದು ಅಸಹಾಯಕತೆ ತೋಡಿಕೊಂಡರು. ‘ಮಾನವೀಯ ನಲೆಯಲ್ಲಿ ಇಷ್ಟು ದಿನ ಸಹಿಸಿಕೊಂಡಿದ್ದೇವೆ. ಇದೀಗ ನೋಟಿಸ್ ನೀಡಿ, ಪ್ರಕರಣ ದಾಖಲಿಸಲಾಗುವುದು’ ಎಂದು ನೆರೆದಿದ್ದ ಜನರನ್ನು ಸಮಾಧಾನ ಮಾಡಿದರು.

ಇದಕ್ಕೂ ಮುನ್ನ ತಹಶೀಲ್ದಾರರನ್ನು ಭೇಟಿ ಮಾಡಿದ ಗ್ರಾಮಸ್ಥರು ಅನಧಿಕೃತ ಮೀನು ಮಾರಾಟದ ವಿರುದ್ಧ ದೂರಿದರು. ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಸಹ ದೂರು ಸಲ್ಲಿಸಿದರು. ರಸ್ತೆ ಬದಿ ಅನಧಿಕೃತ ಮೀನು ಮಾರಾಟದ ಬಗ್ಗೆ ಕಳೆದ ವರ್ಷ ಶಾಸಕರಿಗೆ ಸಹ ಜನ ದೂರು ನೀಡಿದ್ದರು. ಈಚೆಗೆ ನಡೆದ ಜನಸ್ಪಂದನಾ ಸಭೆಯಲ್ಲಿ ಸಹ ದೂರುಗಳು ಕೇಳಿ ಬಂದಿದ್ದವು. ಆದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ.
Discussion about this post