6 Skip to content

ಸಹಸ್ರಳ್ಳಿಯಲ್ಲಿ ಸಾವಿರ ಸಮಸ್ಯೆ: 8 ವರ್ಷದಿಂದ ಇಡೀ ಊರು ಅತಂತ್ರ

`ನೀವು ನಮ್ಮವರಲ್ಲ’ ಅನ್ನುವ ಪಟ್ಟಣ ಪಂಚಾಯತ | `ನಮಗೂ ಸಂಬoಧವಿಲ್ಲ’ ಎನ್ನುವ ಗ್ರಾಮ ಪಂಚಾಯತ

ಯಲ್ಲಾಪುರ: ಸಹಸ್ರಳ್ಳಿ ಊರನ್ನು ಪಟ್ಟಣ ಪಂಚಾಯತ ವ್ಯಾಪ್ತಿಯಿಂದ ಹೊರದಬ್ಬಿ 8 ವರ್ಷ ಕಳೆದಿದೆ. ಗ್ರಾಮ ಪಂಚಾಯತ ತನ್ನ ವ್ಯಾಪ್ತಿಯಲ್ಲಿ ಈ ಊರು ಇನ್ನೂ ಸೇರಿಕೊಂಡಿಲ್ಲ. ಹೀಗಾಗಿ ಆ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲ!
ಈ ಊರಿನಲ್ಲಿ ದಾರಿ ದೀಪಗಳಿಲ್ಲ. ಕುಡಿಯುವ ನೀರಿನ ಸೌಲಭ್ಯ ಸಿಗಲ್ಲ. ರಸ್ತೆ ಅಭಿವೃದ್ಧಿ ಬಗ್ಗೆಯಂತೂ ಯಾರಿಗೆ ಹೇಳಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಶೌಚಾಲಯ, ಶಾಲೆ, ಅಂಗನವಾಡಿಗಳ ಸಮಸ್ಯೆ ಮುಗಿಯುವ ಹಂತದಲ್ಲಿಲ್ಲ. ವಿದ್ಯುತ್ ಪಡೆಯುವ ನಿರಪೇಕ್ಷಣಾ ಪತ್ರಕ್ಕೆ ಸಹ ಅಲೆದಾಟ ತಪ್ಪಿದ್ದಲ್ಲ.
ಇನ್ನೂ ಈವರೆಗೂ ಇಲ್ಲಿ ವಾಸಿಸುವವರಿಗೆ ಮನೆ ನಂ ಸಿಕ್ಕಿಲ್ಲ. ವಾಸ್ತವ್ಯ ಪ್ರಮಾಣ ಪತ್ರ ದೊರೆಯದ ಕಾರಣ ವಿದ್ಯಾರ್ಥಿಗಳ ಹಾಸ್ಟೇಲ್ ಪ್ರವೇಶಕ್ಕೂ ಸಮಸ್ಯೆ ತಪ್ಪಿದ್ದಲ್ಲ. ಅಭಿವೃದ್ಧಿ ವಿಷಯವಾಗಿ 15ನೇ ಹಣಕಾಸು ಸೇರಿದಂತೆ ಯಾವ ಅನುದಾನವನ್ನು ಸಹ ಕೇಳುವ ಹಾಗಿಲ್ಲ. ಹೀಗಾಗಿ ಕೊಂಡೆಮನೆ ಹಾಗೂ ಸಹಸ್ರಳ್ಳಿ ಭಾಗಕ್ಕೆ ಒಳಪಡುವ ಮಾಳ್ಯನಕೊಪ್ಪ, ಅಡಿಕೆಸರ, ಕುಚಗಾವ್, ಜಡಿಗದ್ದೆ, ಬೆಳಸೂರು, ಹುಲಿಮನೆ ಮೊದಲಾದ ಪ್ರದೇಶದ 3ಸಾವಿರಕ್ಕೂ ಅಧಿಕ ಜನರ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ.

ಮಾನವೀಯ ನೆಲೆಯಲ್ಲಿ ಸ್ಪಂದನೆ:

ಬೇಸಿಗೆಯ ಅವಧಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿರುವುದು

ಕಳೆದ ಬೇಸಿಗೆಯಲ್ಲಿ ಸಹಸ್ರಳ್ಳಿಯ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು ಮಾನವೀಯ ನೆಲೆಯಲ್ಲಿ ಗ್ರಾಮ ಪಂಚಾಯತ ಸ್ಪಂದಿಸಿದೆ. ಕಬ್ಬಿನಗುಳಿ ಹಾಗೂ ಗಡಿಗದ್ದೆಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಪೂಜಾ ಗಾವಡೆ, ಪರಷಾ ಇನ್ನಿತರರು ಗ್ರಾಮ ಪಂಚಾಯತಗೆ ಬಂದು ಹೇಳಿಕೊಂಡಿದ್ದರು. ಅವರ ಅಳಲು ಆಲಿಸಿದ ಪಿಡಿಓ ರಾಜೇಶ್ ಶೇಟ್ ಸ್ಥಳ ಪರಿಶೀಲನೆ ನಡೆಸಿ, ಆ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ಒದಗಿಸಿದ್ದಾರೆ.
ಇದನ್ನು ಹೊರತುಪಡಿಸಿ ಉಳಿದ ಯಾವ ಸಮಸ್ಯೆಗೂ ಇಲ್ಲಿ ಉತ್ತರ ಸಿಕ್ಕಿಲ್ಲ. ಈ ಪ್ರದೇಶ ಅಧಿಕೃತವಾಗಿ ಪಂಚಾಯತಗೆ ಸೇರಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದು ಗ್ರಾ ಪಂ ಸದಸ್ಯ ಸುಬ್ಬಣ್ಣ ಉದಾಬೈಲ್ ಅವರ ಅಭಿಪ್ರಾಯ.

Leave a comment

Leave a Reply

You cannot copy content of this page