`ಮುoದಿನ ವಾರ ಮತ್ತೆ ಬರುವೆ’ ಎಂದು ಹೇಳಿ ಶಿರೂರಿಗೆ ಹೋಗಿದ್ದ ಶಾಂತಿ ಇದೀಗ ಶವವಾಗಿ ತವರಿಗೆ ಮರಳಿದ್ದಾಳೆ. ಸಾವಿನ ನಂತರ ನದಿಯಲ್ಲಿ ತೇಲಿಯಾದರೂ ಆಕೆ ತವರು ಸೇರಿದ್ದಾಳೆ. ಕೊನೆಯದಾಗಿ ಆಕೆ ಹೇಳಿದ್ದ ಮಾತುಗಳನ್ನು ನೆನೆದು ಮಾವು ವ್ಯಾಪಾರಿಯಾಗಿರುವ ಶಾಂತಿಯ ತಂದೆ ಪಾಂಡುರoಗ ನಾಯ್ಕ ಭಾವುಕರಾದರು. ಶಾಂತಿ ಅವರ ತಾಯಿ ತಾರಾ ನಾಯ್ಕ ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ.
ಶಿರೂರಿನಲ್ಲಿ ಚಹದ ಅಂಗಡಿ ನಡೆಸುತ್ತಿದ್ದ ಲಕ್ಷಣ ನಾಯ್ಕರ ಎಂಟು ವರ್ಷಗಳ ಹಿಂದೆ ಜೊತೆ ಸಪ್ತಪದಿ ತುಳಿದಿದ್ದ ಶಾಂತಿ ನಾಯ್ಕ (36) ಕಳೆದ ವಾರದ ಹಿಂದೆ ತವರಿಗೆ ಬಂದಿದ್ದಳು. ಗಂಗಾವಳಿ ಮೂಲದ ಆಕೆ ಬಾಲ್ಯವನ್ನು ಗೋಕರ್ಣದಲ್ಲಿ ಕಳೆದಿದ್ದು, ತನ್ನ ಸಂಗಾಡಿ ಜೊತೆ ಸಾಕಷ್ಟು ಮಾತನಾಡಿದ್ದಳು. ಮತ್ತೆ ಶಿರೂರಿಗೆ ಹೋಗುವಾಗ `ಮುಂದಿನ ವಾರ ಮತ್ತೆ ಬರುವೆ’ ಎಂಬ ಭರವಸೆ ನೀಡಿದ್ದಳು. ಶವವಾದರೂ ಸಹ ನೀಡಿದ ಮಾತನ್ನು ಆಕೆ ಉಳಿಸಿಕೊಂಡಿದ್ದಾಳೆ. ಆದರೆ, ಈ ಬಾರಿ ಬರುವಾಗ ಆಕೆ ಪತಿ ಲಕ್ಷ್ಮಣನ ಜೊತೆ ಪುಟಾಣಿಗಳಾದ ರೊಷನ್ ಹಾಗೂ ಅವಂತಿಕಾರನ್ನು ಕರೆದುಕೊಂಡು ಬಂದಿದ್ದಾಳೆ.
ಶಾoತಿಯ ಶವ ನದಿಯಲ್ಲಿ ತೇಲುವುದನ್ನು ಕಂಡು ಆಕೆಯ ಸ್ನೇಹಿತೆಯರು ಕಣ್ಣೀರಾದರು. ಶವ ಹೊತ್ತು ತರುವಾಗ ತಬ್ಬಿಕೊಂಡು ಅತ್ತರು. ಮರಣೋತ್ತರ ಪರೀಕ್ಷೆಗಾಗಿ ಆಕೆಯ ದೇಹವನ್ನು ಆರೋಗ್ಯ ಕೇಂದ್ರಕ್ಕೆ ತಂದಾಗ ನೂರಾರು ಜನ ಜಮಾಯಿಸಿ ಶೋಕ ವ್ಯಕ್ತಪಡಿಸಿದರು. ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಆಕೆ `ಇನ್ನಿಲ್ಲ’ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಊರಿನವರು ಬಿಕ್ಕಿಬಿಕ್ಕಿ ಅತ್ತರು.
Discussion about this post