ಶಿರಸಿ: `ಅನಾಧಿಕಾಲದಿಂದಲೂ ಕೃಷಿಭೂಮಿಗೆ ತೆರಳುವ ದಾರಿ ಅತಿಕ್ರಮಣವಾಗಿದ್ದು, ಅದನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಕುಟುಂಬ ಹಾಗೂ ದನ-ಕರುಗಳ ಜೊತೆ ಸರ್ಕಾರಿ ಕಚೇರಿಗೆ ಆಗಮಿಸಿ ಪ್ರತಿಭಟಿಸುತ್ತೇವೆ’ ಎಂದು ಕುಪಗದ್ದೆ ಗ್ರಾಮದ ಕೆಲ ರೈತರು ಸರ್ಕಾರಕ್ಕೆ ಎಚ್ಚರಿಕೆ ಪತ್ರ ನೀಡಿದ್ದಾರೆ.
ಕುಪಗದ್ದೆ ಗ್ರಾಮದ ಸ ನಂ. 62ರಿಂದ 33ರವರೆಗೆ ದಾರಿಯಿರುವ ಬಗ್ಗೆ ದಾಖಲೆಯಿದೆ. ಆದರೆ, ಈಚೆಗೆ ಕೆಲವರು ಅದನ್ನು ಅತಿಕ್ರಮಿಸಿದ್ದಾರೆ.
ಕಾರ್ಯಾಲಯದ ಅಧಿಕಾರಿಗಳು ಬಂದು ನಮಗೆ ಅಧಿಕೃತವಾಗಿ ಸ.ನಂ. 62ರಿಂದ 33ಕ್ಕೆ ಹೊಗಲು ನಕಾಶೆಯಲ್ಲಿ ಇರುವ ದಾರಿಯನ್ನು ತೋರಿಸಿದ್ದರು. ಆದರೆ ಸದ್ರಿ ದಾರಿಯನ್ನು ಸ.ನಂ 62 ಮತ್ತು 48ರ ಮಾಲಕರಾದ ರಾಜಶೇಖರ ಚಂದ್ರಶೇಖರ ಗೌಡ ಮತ್ತು ಅವರ ಕುಟುಂಬದವರು ಅತಿಕ್ರಮಣ ಮಾಡಿದ್ದಾರೆ. ಇದರಿಂದ ನಮ್ಮ ಕೃಷಿ ಜಮೀನಿಗೆ ತೆರಳಲು ತೊಂದರೆ ಉಂಟಾಗಿದೆ’ ಎಂದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಹಿಂದೆ ದಾರಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಕು ಎಂದು ಆದೇಶಿಸಿದ್ದರು. ಆದರೆ, ಆದೇಶ ಪಾಲನೆ ಆಗಿಲ್ಲ’ ಎಂದು ದೂರಿದರು.
`ರಸ್ತೆ ತೆರವುಗೊಳಿಸಲು ತಹಶೀಲ್ದಾರರು ಹಿಂದೆ ಮಾಡಿದ ಆದೇಶದ ಪ್ರಕಾರ ದಾರಿ ಬಿಡಬೇಕು. ದಾರಿ ತೆರವುಗೊಳಿಸದಿದ್ದರೆ ಕುಟುಂಬ ದನಕರುಗಳ ಸಮೇತ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುವುದು ಅನಿವಾರ್ಯ’ ಎಂದು ಬಸವಂತಪ್ಪ ದಡ್ಡಿಕೊಪ್ಪ, ಮಲ್ಲಪ್ಪ ದಡ್ಡಿಕೊಪ್ಪ, ನಾಗಪ್ಪ ದಡ್ಡಿಕೊಪ್ಪ, ಮಾಲತೇಶ ದಡ್ಡಿಕೊಪ್ಪ ಎಚ್ಚರಿಸಿದರು. ಕಂದಾಯ ಇಲಾಖೆ ಅಧಿಕಾರಿ ಶ್ರೀಕೃಷ್ಣ ಕಾಮ್ಕರ್ ಪತ್ರ ಸ್ವೀಕರಿಸಿದರು.
Discussion about this post