6
September 28, 2026

ಗುಡ್ಡದ ತಪ್ಪಲಿನಲ್ಲಿ ಕಣ್ಮರೆಯಾದ ಲೋಕೇಶ: ಮಗನಿಗಾಗಿ ತಾಯಿಯ ಅಲೆದಾಟ

ಗಂಗೆಕೊಳ್ಳದ ಲೋಕೇಶ್ ನಾಯ್ಕ (30) ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಕೊನೆಯದಾಗಿ ನೋಡಿದ್ದು, ಅದಾದ ನಂತರ ಆತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
ಗೋವಾದಲ್ಲಿ ದೋಣಿ ರಿಪೇರಿ ಮಾಡಿಕೊಂಡಿದ್ದ ಲೋಕೇಶ್ ನಾಯ್ಕ ಜ್ವರ ಬಂದ ಕಾರಣ ಊರಿಗೆ ಮರಳಿದ್ದ. ನಂತರ ಶೃಂಗೇರಿಗೆ ಹೋಗಿಬರುವುದಾಗಿ ಹೇಳಿ ಹೋದವ ಶೃಂಗೇರಿ ತಲುಪಿಲ್ಲ. ಗೋವಾದ ಕೆಲಸಕ್ಕೂ ಆತ ಹೋಗಿ ಸೇರಿಲ್ಲ. ಆತನ ಸಹೋದರ ವಿನಾಯಕ ರತ್ನಾಗಿರಿಯಲ್ಲಿದ್ದು ಆತನಿಗೂ ಲೋಕೇಶ ಎಲ್ಲಿ ಹೋದ? ಎಂದು ಗೊತ್ತಾಗಿಲ್ಲ.
ಜುಲೈ 16ರಂದು ಈತ ಶಿರೂರು ಗುಡ್ಡದ ಕೆಳಗಿರುವ ಚಹದ ಅಂಗಡಿ ಬಳಿ ಬ್ಯಾಗ್ ಹಾಕಿಕೊಂಡು ನಿಂತಿರುವುದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಗಂಗೆಕೊಳ್ಳದ ಬಸ್ ಚಾಲಕ ವಿನೋದ ನಾಯ್ಕ ಆತನನ್ನು ನೋಡಿದ್ದು, ಅದಾದ ನಂತರ ಲೋಕೇಶನನ್ನು ನೋಡಿದವರಿಲ್ಲ.
ಇದೀಗ ಲೋಕೇಶನ ತಾಯಿ ಮಾದೇವಿ ಆತನ ಫೋಟೋ ಹಿಡಿದು ಎಲ್ಲಡೆ ಅಡ್ಡಾಡುತ್ತಿದ್ದಾರೆ. ಕಂಡ ಕಂಡವರಲ್ಲಿ `ನನ್ನ ಮಗನನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸುತ್ತಿದ್ದಾರೆ. ಪೊಲೀಸರ ಬಳಿಯೂ `ಮಗನನ್ನು ಹುಡುಕಿಕೊಡಿ’ ಎಂದು ಆಕೆ ಮನವಿ ಮಾಡಿದ್ದು, ಯಾರಿಂದಲೂ ಯಾವುದೇ ಉತ್ತರ ಸಿಕ್ಕಿಲ್ಲ.

Leave a Reply

Your email address will not be published. Required fields are marked *

You cannot copy content of this page