ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಬಾಲಕನ ಕೈ ತುಂಡಾಗಿ ಬಿದ್ದಿದೆ. ಅದು ರೋಶನ್ ನಾಯ್ಕ ಎಂಬಾತನ ಕೈ ಎಂಬುದು ಎಲ್ಲರಿಗೂ ಗೊತ್ತಿದೆ. ಮೇಲಾಗಿ ಕೈಗೆ ಕಟ್ಟಿರುವ `ಕೆಂಪು ದಾರ’ ಇದಕ್ಕೆ ಸಾಕ್ಷಿ ಹೇಳಿದೆ. ಸ್ವತ: ಆ ದಾರ ಕಟ್ಟಿದವರೇ ಬಂದು ಹೇಳಿದರೂ ಸಂಸ್ಕಾರಕ್ಕಾಗಿ ಆ ಅಂಗಾoಗ ಹಸ್ತಾಂತರಕ್ಕೆ ಕಾನೂನು ತೊಡಕು ಎದುರಾಗಿದೆ.
`ಅಲ್ಲಿ ದೊರೆತಿರುವ ಕೈ ರೋಶನ್’ದು. ಅದನ್ನು ನಮಗೆ ನೀಡಿ’ ಎಂದು ಎಂದು ಸಂಬoಧಿಕರು ರೋಧಿಸುತ್ತಿದ್ದಾರೆ. `ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗಾoಗ ನೀಡಲಾಗುವುದಿಲ್ಲ’ ಎಂದು ವೈದ್ಯಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ.ಈ ಸನ್ನಿವೇಶ ಶಿರೂರಿನ ಗುಡ್ಡ ಕುಸಿತದ ಭೀಕರತೆಯನ್ನು ಪ್ರದರ್ಶಿಸಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸಿದೆ. ಶಿರೂರು ಗುಡ್ಡ ಕುಸಿತದ ರಭಸಕ್ಕೆ ಹತ್ತಕ್ಕೂ ಹೆಚ್ಚು ಮಂದಿ ನದಿಯಲ್ಲಿ ಕೊಚ್ಚಿ ಹೋಗಿದ್ದು, ಕೆಲವೊಂದು ಅಂಗಾಗ ಇಲ್ಲದ ಶವಗಳು ದೊರೆಯುತ್ತಿದೆ. ಇನ್ನು ಕೆಲವಡೆ ಅಂಗಾoಗ ಮಾತ್ರ ದೊರೆಯುತ್ತಿದೆ.
ಅದೇ ರೀತಿ ಲಕ್ಷ್ಮಣ ನಾಯ್ಕರ ಮಗ ರೋಶನ್ ಶವ ಗಂಗಾವಳಿ ನದಿ ತಟದ ಪ್ರದೇಶವಾದ ಗಂಗೆಕೊಳ್ಳದಲ್ಲಿ ಸಿಕ್ಕಿದ್ದು, ಆಗ ಬಲಗೈ ಮಾತ್ರ ದೊರೆತಿರಲಿಲ್ಲ. ನಂತರ ನಿರಂತರ ಶೋಧಕಾರ್ಯದ ನಡುವೆ ಕೈ ಒಂದು ಸಿಕ್ಕಿದ್ದು, ಅದು ರೋಶನ್’ದು ಎಂದು ಖಚಿತವಾಗಿತ್ತು. ಆದರೆ, ಅದನ್ನು ಅಧಿಕಾರಿಗಳು ಸರಕಾರಿ ಆಸ್ಪತ್ರೆಗೆ ತಂದು ಸಂರಕ್ಷಿಟ್ಟಿದ್ದರು. ಕೈ ದೊರೆತ ಬಗ್ಗೆ ಮಾಹಿತಿ ಪಡೆದ ಲಕ್ಷ್ಮಣ ನಾಯ್ಕರ ಸಂಬoಧಿಕರು ಅಂಕೋಲಾ ಪೊಲೀಸರಲ್ಲಿ `ನಮ್ಮ ಮನೆ ಹುಡುಗನ ಕೈ ಅದು ನಮಗೆ ಸಂಸ್ಕಾರ ಮಾಡಲು ನೀಡಿ’ ಎಂದು ಕೇಳಿಕೊಂಡರು. `ಕೈ ಬಗ್ಗೆ ಯಾವುದೇ ವೈದ್ಯಕೀಯ ತಪಾಸಣೆ ಆಗಿಲ್ಲ. ಡಿಎನ್‌ಎ ತಪಾಸಣೆಯಾದ ಬಳಿಕ ನೀಡುತ್ತೇವೆ’ ಎಂಬುದು ಪೊಲೀಸರ ಮಾತು.




Discussion about this post