`ಅಜ್ಞಾನವೇ ಆವರಣ. ಸುಜ್ಞಾನವೇ ಅನಾವರಣ. ಅರಿವಿನ ಪ್ರಾಪ್ತಿಯೇ ನಿಜವಾದ ಅನಾವರಣ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವಭಾರತೀ ಸ್ವಾಮೀಜಿ ಹೇಳಿದ್ದಾರೆ.
ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ಅನಾವರಣ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
`ಪ್ರತಿಯೊಬ್ಬರ ಹೃದಯವೂ ಒಂದು ಅಮೂಲ್ಯ ರತ್ನ. ಆದರೆ ಅದರ ಕಲ್ಪನೆ ನಮಗಿಲ್ಲ. ರತ್ನಕ್ಕೆ ಮುಚ್ಚಿರುವ ಆವರಣವನ್ನು ಸುಜ್ಞಾನದ ಮೂಲಕ ಸರಿಸುವುದೇ ಅನಾವರಣ’ ಎಂದರು. `ನಮ್ಮ ನಮ್ಮ ಆತ್ಮಗಳ ಅನಾವರಣಕ್ಕೆ ಈ ಚಾತುರ್ಮಾಸ್ಯ ವೇದಿಕೆಯಾಗಲಿ. ಆತ್ಮದ ಹಾದಿ ಶಿಷ್ಯರಿಗೆ ಕಾಣುವಂತಾಗಲಿ. ಸತ್ಯದ ಅನುಭೂತಿಯಾಗಿ ಪೂರ್ಣತೃಪ್ತಿ ಸಿಗುವಂಥ ಅನಾವರಣ ಆಗಲಿ’ ಎಂದು ಹೇಳಿದರು.
`ಮನುಷ್ಯ ತನ್ನ ದಿವ್ಯತೆಯನ್ನು ದುರುಪಯೋಗ ಮಾಡದಂತೆ ಹುದುಗಿಸಿಡಲು ನಿರ್ಧರಿಸಿ ಬ್ರಹ್ಮದೇವರು ಅದನ್ನು ಮನುಷ್ಯನ ಹೃದಯದಲ್ಲೇ ಅಡಗಿಸುತ್ತಾನೆ. ಅದನ್ನು ಪ್ರಯತ್ನಪೂರ್ವಕವಾಗಿ ಅರಸುವವನಿಗೆ ಮಾತ್ರ ಅದು ಗೋಚರಿಸುತ್ತದೆ. ಭೂಮಿ, ಆಕಾಶ, ನೀರು ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಹುಡುಕಿದರೂ ತನ್ನೊಳಗಿನ ದಿವ್ಯತೆಯನ್ನು ಮರೆತಿದ್ದಾನೆ. ಈ ತೆರೆಯನ್ನು ಸರಿಸಲು ಗುರು ಬೇಕು’ ಎಂದು ಅಭಿಪ್ರಾಯಪಟ್ಟರು.
Discussion about this post