ಕೇಂದ್ರ ಸಚಿವ ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆಗೆ ಬಂದಾಗಲೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ಬರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗಮಿಸಿದಾಗಲೂ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ. ತುರ್ತು ಕೆಲಸದ ನಿಮಿತ್ತ ದೆಹಲಿಯಲ್ಲಿದ್ದರೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಡಪಡಿಸುತ್ತಿದ್ದಾರೆ.
ಅಭಿನಂದನಾ ಸಭೆಯಲ್ಲಿ ಭಾಗವಹಿಸಲು ಕಾರವಾರಕ್ಕೆ ತೆರಳಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಗುಡ್ಡ ಕುಸಿತದ ಸುದ್ದಿ ಕೇಳಿ ಸಭೆಯನ್ನು ರದ್ಧು ಮಾಡಿ ಕುಸಿತದ ಸ್ಥಳಕ್ಕೆ ಧಾವಿಸಿದ್ದರು. ಶಿರೂರು ಹಾಗೂ ಶಿರವಾಡದ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಡಳಿತಕ್ಕೆ ಹಲವು ಸೂಚನೆಗಳನ್ನು ನೀಡಿದ್ದರು. ಇದಾದ ನಂತರ ಕೇಂದ್ರದ ಮೇಲೆ ಒತ್ತಡ ತಂದು ಮಿಲಟರಿ ಪಡೆಯನ್ನು ಸಹ ಜಿಲ್ಲೆಗೆ ಕಳುಹಿಸಿಕೊಟ್ಟಿದ್ದರು.
ಈ ನಡುವೆ ತುರ್ತಾಗಿ ಅವರಿಗೆ ದೆಹಲಿಗೆ ತೆರಳಬೇಕಾಗಿದ್ದು, ಮನಸ್ಸಿಲ್ಲದೇ ಮನಸ್ಸಿನಿಂದಲೇ ವಿಮಾನ ಏರಿದ್ದಾರೆ. ಅವರು ದೆಹಲಿಯಲ್ಲಿದ್ದರೂ ಇಲ್ಲಿನ ಪರಿಸ್ಥಿತಿಯ ಬಗ್ಗೆಯೇ ಚಿಂತಿಸುತ್ತಿದ್ದಾರೆ. `ಕುಮಾರಸ್ವಾಮಿ ಅವರು ಬಂದಾಗ ನಾನು ಅವರ ಜೊತೆ ಇರಬೇಕಿತ್ತು. ಆದರೆ, ಆಗುತ್ತಿಲ್ಲ’ ಎಂದು ಮೊದಲು ಅವರು ಪತ್ರಿಕಾ ಪ್ರಕಟಣೆ ನೀಡಿದರು. ಅದಾದ ನಂತರ `ವಿಜಯೇಂದ್ರ ಅವರು ಆಗಮಿಸಿದಾಗ ಸಹ ಬರಲು ಆಗುತ್ತಿಲ್ಲ’ ಎಂದು ನೋವು ವ್ಯಕ್ತಪಡಿಸಿದರು. ಈ ನಡುವೆ ಜಿಲ್ಲಾಡಳಿತ, ತಮ್ಮ ಕಾರ್ಯಕರ್ತರು, ಪಕ್ಷದ ಮುಖಂಡರ ಜೊತೆ ನಿರಂತರ ಫೋನ್ ಸಂಪರ್ಕದಲ್ಲಿರುವ ಕಾಗೇರಿ ಇಲ್ಲಿನ ಆಗು-ಹೋಗುಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅನಿವಾರ್ಯವಾಗಿ ದೆಹಲಿಯಲ್ಲಿದ್ದರೂ `ಜನರ ಕಷ್ಟದ ವೇಳೆ ನಾನೂ ಜಿಲ್ಲೆಯಲ್ಲಿಲ್ಲವಲ್ಲ’ ಎನ್ನುತ್ತ ಚಡಪಡಿಸುತ್ತಿದ್ದಾರೆ.
ದೆಹಲಿಯಿಂದ ಜಿಲ್ಲೆಗೆ ಮರಳಿದ ತಕ್ಷಣ ಮತ್ತೆ ಮೊದಲು ಜನರ ಅಹವಾಲು ಆಲಿಸಿ, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಸ್ಪಂದಿಸುವುದಾಗಿ ಸಂಸದ ಕಾಗೇರಿ ಹೇಳಿಕೊಂಡಿದ್ದಾರೆ.
Discussion about this post